ಶಬರಿಮಲೆ: ನ.13ರಂದು ಪುನರ್ ಪರಿಶೀಲನಾ ಅರ್ಜಿ ವಿಚಾರಣೆ

Update: 2018-10-23 08:47 GMT

ಶಬರಿಮಲೆ, ಅ.23: ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ತುಲಾ ಮಾಸದ ಪೂಜೆಯ ಕೊನೆಯ ದಿನವಾಗಿರುವ ಸೋಮವಾರ ಪ್ರವೇಶಿಸಲು 6 ಮಂದಿ ಮಹಿಳೆಯರು ಪ್ರಯತ್ನ ನಡೆಸಿದ್ದಾರೆ. ಆದರೆ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ.
ಐದು ದಿನಗಳ ಪೂಜೆಯ ಬಳಿಕ ದೇವಸ್ಥಾನದ ಬಾಗಿಲನ್ನು ಸೋಮವಾರ ರಾತ್ರಿ ಮುಚ್ಚಲಾಗಿದ್ದು, ನ.4ರಂದು ಒಂದು ದಿನದ ಪೂಜೆಗೆ ಮತ್ತೆ ಬಾಗಿಲು ತೆರೆಯಲಿದೆ.
ಸೋಮವಾರ ಆಂಧ್ರಪ್ರದೇಶದ ಗುಂಟೂರಿನ  5 ಮಂದಿ ಮಹಿಳೆಯರು ಶಬರಿಮಲೆಗೆ ಪ್ರವೇಶಕ್ಕೆ ಯತ್ನ ನಡೆಸಿದರು. ಆದರೆ ಅವರನ್ನು ಪ್ರತಿಭಟನೆಕಾರರು ಹಿಂದಕ್ಕೆ ಕಳುಹಿಸಿದರು.
ಕೋಝಿಕ್ಕೋಡ್  ನ ಮಹಿಳೆ ಬಿಂದು ಎಂಬವರು ಪೊಲೀಸರ ಅನಮತಿ ಪಡೆದು ಶಬರಿ ಮಲೆಗೆ ಹೊರಟಿದ್ದರು. ದಾರಿಮಧ್ಯೆ ಆಕೆಯನ್ನು ಪ್ರತಿಭಟನೆಕಾರರು ತಡೆದರು. ಪೊಲೀಸರು ಆಕೆಯ ರಕ್ಷಣೆ ನೀಡಿದರು. ಶಬರಿಮಲೆ ಪ್ರವೇಶಿಸುವ ಆಕೆಯ ಪ್ರಯತ್ನ ಸಫಲವಾಗಲಿಲ್ಲ.
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಷ್ಠಾನ ಸಾಧ್ಯವಾಗಿಲ್ಲ. 10ಕ್ಕಿಂತ ಕೆಳಗಿನ ಹರೆಯದ ಬಾಲಕಿಯರು   ಮತ್ತು 50ಮೇಲ್ಪಟ್ಟ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ.  
ಕಳೆದ ಬುಧವಾರ ದೇವಸ್ಥಾನದ ಬಾಗಿಲು ತೆರೆದ ಬಳಿಕ 10ರಿಂದ 50ರ ಹರೆಯದ ಒಟ್ಟು 13 ಮಂದಿ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಲು ವಿಫಲ ಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.
ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶವನ್ನು ನೀಡಿದ ಸುಪ್ರೀಂ ಕೋರ್ಟ್ ನ ಪರ ಮತ್ತು ವಿರೋಧವಾಗಿ  ಶಬರಿಮಲೆ   ಸುತ್ತಮುತ್ತ ನಡೆಯುತ್ತಿದ್ದ ಚಳವಳಿ ತಾತ್ಕಾಲಿಕವಾಗಿ ಕೊನೆಗೊಂಡಿದೆ. ಅಶಾಂತಿಯ ವಾತಾವರಣ ತಿಳಿಯಾಗಿದೆ. ಭಾರೀ ಹಿಂಸಾಚಾರ ಮತ್ತು ಸಾವು ನೋವು ಸಂಭವಿಸುವುದನ್ನು  ತಡೆಗಟ್ಟುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ.  
ಟ್ರಾವಂಕೂರು ದೇವಸ್ವಮ್ ಮಂಡಳಿ (ಟಿಡಿಬಿ) ಮಂಗಳವಾರ ಸಭೆ ಸೇರಲಿದ್ದು, ಸುಪ್ರೀಂ ಕೋರ್ಟ್ ನ ತೀರ್ಪಿನ ಅನುಷ್ಠಾನದ ಹಿನ್ನೆಲೆಯಲ್ಲಿ  ಎದುರಾಗಿರುವ ಅಡೆತಡೆ, ಕಾನೂನು ಮತ್ತು ಸುವ್ಯವಸ್ಥೆ  ಸಂಬಂಧಿಸಿ ಅಂತಿಮ ವರದಿ ಸಲ್ಲಿಸುವ ಬಗ್ಗೆ  ನಿರ್ಧಾರ ಕೈಗೊಳ್ಳಲಿದೆ.

ನ.13ರಂದು ಪುನರ್ ಪರಿಶೀಲನಾ ಅರ್ಜಿ ವಿಚಾರಣೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಿಸಿ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು  ನ.13ರಂದು  ಸುಪ್ರೀಂ ಕೋರ್ಟ್  ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News