ಕೆಲವು ತನಿಖೆಗಳು ಸರಕಾರ ‘ಬಯಸಿದಂತೆ' ನಡೆದಿರಲಿಲ್ಲ : ಅಲೋಕ್ ವರ್ಮಾ ಆರೋಪ
ಹೊಸದಿಲ್ಲಿ, ಅ.24: ದೇಶದ ಪ್ರಮುಖ ತನಿಖಾ ಸಂಸ್ಥೆಯ ಸ್ವಾಯತ್ತತೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಮತ್ತು ಕೆಲವು ಉನ್ನತ ಅಧಿಕಾರಿಗಳ ವಿರುದ್ಧ ನಡೆಯುತ್ತಿದ್ದ ತನಿಖೆಯು ಸರಕಾರ ಬಯಸಿದ್ದ ರೀತಿಯಲ್ಲಿ ನಡೆಯುತ್ತಿರಲಿಲ್ಲ ಎಂದು ವಜಾಗೊಳಿಸಲ್ಪಟ್ಟ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಸರ್ವೋಚ್ಚ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಒಂದು ಗಂಟೆಗೆ ನಡೆದ ಕಾರ್ಯಾಚರಣೆಯಲ್ಲಿ ವರ್ಮಾರನ್ನು ಹುದ್ದೆಯಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಸಿಬಿಐ ಜಂಟಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರನ್ನು ನೇಮಿಸಲಾಗಿತ್ತು. ತನ್ನ ಉಚ್ಛಾಟನೆಯನ್ನು ಪ್ರಶ್ನಿಸಿ ವರ್ಮಾ ಶ್ರೇಷ್ಟ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ಶುಕ್ರವಾರ ನಡೆಯಲಿದೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಸುಳ್ಳು ಸಾಕ್ಷಿಯನ್ನು ಸೃಷ್ಟಿಸಿ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಮಾಡಿದ್ದಾರೆ. ಹಲವು ಸೂಕ್ಷ್ಮ ಪ್ರಕರಣಗಳಲ್ಲಿ ತಾನು ಬಹುತೇಕ ಅಧಿಕಾರಿಗಳ ಅಭಿಪ್ರಾಯಕ್ಕೆ ವಿರೋಧ ಹೊಂದಿದ್ದೆ ಎಂದು ವರ್ಮಾ ತನ್ನ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.