ಶಬರಿಮಲೆ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವರದಿ ಸಲ್ಲಿಸದಿರಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧಾರ
ತಿರುವನಂತಪುರ, ಅ. 24: ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರ ಭೇಟಿಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಶಬರಿಮಲೆಯಲ್ಲಿ ಪ್ರಸಕ್ತ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವರದಿ ಸಲ್ಲಿಸದಿರಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಬುಧವಾರ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಅಗತ್ಯತೆ ಇಲ್ಲ ಎಂದು ಟಿಡಿಬಿ ಹೇಳಿದೆ. ಸುಪ್ರೀಂ ಕೋರ್ಟ್ ಕೇಳಿದರೆ ಮಾತ್ರ ವರದಿ ಸಲ್ಲಿಸಲಾಗುವುದು ಎಂದು ಟಿಡಿಬಿ ಸದಸ್ಯ ಕೆ.ಪಿ. ಶಂಕರ ದಾಸ್ ತಿಳಿಸಿದ್ದಾರೆ.
ಶಬರಿಮಲೆಯ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಈ ಹಿಂದೆ ಟಿಡಿಬಿ ಹೇಳಿತ್ತು. ಶಬರಿಮಲೆ ವಿಷಯದ ಕುರಿತು ಬಾಕಿ ಇರುವ ಮರು ಪರಿಶೀಲನಾ ಅರ್ಜಿ ಪರಿಗಣಿಸಿ ಸುಪ್ರೀಂ ಕೋರ್ಟ್ ವರದಿ ಕೋರಿದರೆ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಟಿಡಿಬಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಅಗತ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ 19 ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 13ಕ್ಕೆ ಮುಂದೂಡಿದೆ.
ಮರು ಪರಿಶೀಲನ ಅರ್ಜಿ ಸಲ್ಲಿಸುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿಲ್ಲ ಹಾಗೂ ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ ದಿನದ ಬಳಿಕ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದ ಮುಖ್ಯ ಅರ್ಚಕ ಹಾಗೂ ಪಂದಳಂ ರಾಜ ಕುಟುಂಬವನ್ನು ವಿಜಯನ್ ಮಂಗಳವಾರ ಟೀಕಿಸಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ದೇವಾಲಯ ಮುಚ್ಚಲಾಗುವುದು ಎಂಬ ಮುಖ್ಯ ಅರ್ಚಕ ರಾಜೀವರು ಅವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷ ಒಳಗಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆಗೆ ಕೈಜೋಡಿಸಿರುವ ದೇವಾಲಯದ ಮುಖ್ಯ ಅರ್ಚಕ ಹಾಗೂ ಉಪ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ತಿರುವಾಂಕೂರು ದೇವಸ್ವ ಮಂಡಳಿಗೆ ಸೂಚಿಸಿದ್ದಾರೆ.