ಬೆಂಗಳೂರು: ಆ್ಯಮ್ನೆಸ್ಟಿ ಇಂಡಿಯಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ
ಬೆಂಗಳೂರು, ಅ.25: ನಗರದಲ್ಲಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ದಾಳಿ ನಡೆಸಿದೆ.
ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಆಮ್ನೆಸ್ಟಿ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆ ಆರೋಪದ ಸಂಬಂಧ ಆಮ್ನೆಸ್ಟಿ ಸಂಸ್ಥೆ ವಿರುದ್ಧ ಇಡಿ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಮ್ನೆಸ್ಟಿ ವಿರುದ್ಧ 2016ರಲ್ಲಿಯೂ ಐಪಿಎಸ್ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಸಂಸ್ಥೆ ಭಾಗಿಯಾಗಿರುವ ಆರೋಪದ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.
ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ಮೇಲೆ ಇಡಿ ದಾಳಿಯ ಬಳಿಕ 400 ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ, ಎನ್‌ಜಿಒಗಳ ದನಿಯನ್ನು ಅಡಗಿಸಲು ಕೇಂದ್ರ ಸರಕಾರ ದಬ್ಬಾಳಿಕೆಯ ಕ್ರಮಗಳನ್ನು ಅನುರಿಸಬಾರದು ಎಂದು ಆಗ್ರಹಿಸಿದ್ದವು.