ರಫೇಲ್‌ಗೆ ಹೆದರಿ ಸಿಬಿಐ ಮುಖ್ಯಸ್ಥರನ್ನು ವಜಾಗೊಳಿಸಿದ ಮೋದಿ: ರಾಹುಲ್ ಗಾಂಧಿ
ಕೋಟಾ(ರಾಜಸ್ತಾನ),ಅ.25: ಕೇಂದ್ರ ತನಿಖಾ ಸಂಸ್ಥೆಯು ರಫೇಲ್ ಯುದ್ಧವಿಮಾನ ಒಪ್ಪಂದದ ತನಿಖೆಯನ್ನು ನಡೆಸಲಿದೆ ಎಂದು ಭಯಭೀತಗೊಂಡ ಪ್ರಧಾನಿ ಮೋದಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಿಬಿಐ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಬುಧವಾರ ರಾಜಸ್ತಾನಕ್ಕೆ ಎರಡು ದಿನಗಳ ಪ್ರವಾಸದಲ್ಲಿ ತೆರಳಿದ ವೇಳೆಯೂ ರಾಹುಲ್ ಗಾಂಧಿ ಇದೇ ಹೇಳಿಕೆಯನ್ನು ನೀಡಿದ್ದರು. ಅವರು ರಾಜಸ್ತಾನ ಪ್ರವಾಸ ಬೆಳೆಸಿದ ದಿನವೇ ಸಿಬಿಐಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದವು. ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ರಫೇಲ್ ಒಪ್ಪಂದದ ತನಿಖೆ ನಡೆಸಲು ಬಯಸಿದ ಕಾರಣ ಅವರನ್ನು ರಜೆಯಲ್ಲಿ ಕಳುಹಿಸಲಾಗಿದೆ ಎಂಬ ಆರೋಪವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
ಗುರುವಾರದಂದು ರಾಜಸ್ತಾನದ ಸಿಕರ್ ಮತ್ತು ಕೋಟಾದಲ್ಲಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಗಾಂಧಿ ಮತ್ತೆ ತಮ್ಮ ಬುಧವಾರದ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಈ ವೇಳೆ, ತಾನು ಭ್ರಷ್ಟಾಚಾರದ ವಿರುದ್ಧ ದೇಶದ ಕಾವಲುಗಾರನಾಗಲು ಬಯಸುತ್ತೇನೆ ಎಂಬ ಮೋದಿಯ ಹಳೆ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಎರಡು ದಿನಗಳ ಹಿಂದೆ ದೇಶದ ಕಾವಲುಗಾರ ಏನೋ ಹೊಸತನ್ನು ಮಾಡಿದ್ದಾರೆ. ಆದರೆ ಅದನ್ನು ಅವರು ದಿನದಲ್ಲಿ ಮಾಡಲಿಲ್ಲ, ಬದಲಿಗೆ ದೇಶದ ಜನರು ಮಲಗಿರುವಾಗ ರಾತ್ರಿಯ ವೇಳೆ ಮಾಡಿದ್ದಾರೆ ಎಂದು ಕುಟುಕಿದರು. ಒಬ್ಬ ಕಾವಲುಗಾರನಿಂದ ದೇಶದ ಎಲ್ಲ ಕಾವಲುಗಾರರಿಗೆ ಕೆಟ್ಟ ಹೆಸರು ಬಂದಿರುವುದು ನನಗೆ ಬೇಸರ ತಂದಿದೆ. ಈ ಕಾವಲುಗಾರರು ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ನಾನು ಮಾತನಾಡುತ್ತಿರುವುದು, ನನ್ನನ್ನು ಪ್ರಧಾನಿ ಮಾಡಬೇಡಿ ಕಾವಲುಗಾರನಾಗಿ ಮಾಡಿ ಎಂದು ಹೇಳಿದ್ದ ವ್ಯಕ್ತಿಯ ಬಗ್ಗೆ ಎಂದು ಕಾಂಗ್ರೆಸ್ ಅಧ್ಯಕ್ಷ ಸೂಚ್ಯವಾಗಿ ತಿಳಿಸಿದ್ದಾರೆ.
ರಾಜ್ಯದ ಶೆಖಾವತಿ ಪ್ರದೇಶದ ಸೇನಾ ಜವಾನರ ಬಲಿದಾನವನ್ನು ಈ ವೇಳೆ ಸ್ಮರಿಸಿದ ಗಾಂಧಿ, ಅದನ್ನು ಫ್ರಾನ್ಸ್ ಜೊತೆಗಿನ ಯುದ್ಧವಿಮಾನ ಒಪ್ಪಂದದ ಜೊತೆ ಥಳುಕು ಹಾಕಿದರು. ಇದೇ ವೇಳೆ ಕೇಂದ್ರವು ರಿಲಾಯನ್ಸ್ ಸಮೂಹದ ಜೊತೆ ಮಾಡುತ್ತಿರುವ ಪಕ್ಷಪಾತಿ ಧೋರಣೆಯನ್ನು ಅವರು ಖಂಡಿಸಿದ್ದಾರೆ
ಯುಪಿಎ ಅವಧಿಯಲ್ಲಿ ನಿಗದಿಯಾಗಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ರಫೇಲ್ ಒಪ್ಪಂದವನ್ನು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಒಪ್ಪಂದ ಮಾಡಿಕೊಳ್ಳುವ ವೇಳೆ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ವಾಯುಪಡೆಯ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ದೂರಿದ್ದಾರೆ.
ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರನ್ನು ವಜಾಗೊಳಿಸಿರುವುದು ಸಂವಿಧಾನಕ್ಕೆ ಮಾಡಿದ ಅವಮಾನ. ರಫೇಲ್ ಯುದ್ಧವಿಮಾನ ಒಪ್ಪಂದದ ತನಿಖೆ ನಡೆಸಲು ವರ್ಮಾ ಬಯಸಿದ್ದ ಕಾರಣ ಅವರನ್ನು ವಜಾಗೊಳಿಸಲಾಗಿದೆ.