ಕೇಂದ್ರ ಸರಕಾರಕ್ಕೆ ಸಿಬಿಐ ನಿರ್ದೇಶಕರನ್ನು ವಜಾಗೊಳಿಸುವ ಅಧಿಕಾರವಿಲ್ಲ: ಮೋದಿಗೆ ಖರ್ಗೆ ಪತ್ರ

Update: 2018-10-25 15:26 GMT

ಹೊಸದಿಲ್ಲಿ,ಅ.25: ಕೇಂದ್ರ ಸರಕಾರವು ದೇಶದ ತನಿಖಾ ಸಂಸ್ಥೆಗಳನ್ನು ತನಗೆ ಬೇಕಾದಂತೆ ಬಳಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಲೋಕಸಭಾ ನಾಯಕ, ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ಮೋದಿಗೆ ಪತ್ರ ಬರೆದು, ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರ ಉಚ್ಚಾಟನೆಗೆ ಕಾರಣವನ್ನು ಕೇಳಿದ್ದಾರೆ. ಕೇಂದ್ರ ಸರಕಾರಕ್ಕೆ ಸಿಬಿಐ ನಿರ್ದೇಶಕರನ್ನು ವಜಾಗೊಳಿಸುವ ಅಧಿಕಾರವೂ ಇಲ್ಲ ಮತ್ತು ಕೇಂದ್ರ ಜಾಗೃತದಳಕ್ಕೆ ಇಂಥ ಸಲಹೆ ನೀಡುವ ಅಧಿಕಾರವೂ ಇಲ್ಲ ಎಂದು ಖರ್ಗೆ ಪ್ರಧಾನಿಗೆ ಬರೆದ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

ಮೊದಲನೆಯದಾಗಿ, ಸಿಬಿಐ ನಿರ್ದೇಶಕರನ್ನು ವಜಾಗೊಳಿಸಲು ಯಾವುದೇ ಪ್ರತ್ಯಕ್ಷ ಕಾರಣ ಕಂಡುಬರುತ್ತಿಲ್ಲ. ಅಲೋಕ್ ವರ್ಮಾ ನಡೆಸುತ್ತಿದ್ದ ಸಿಬಿಐ ವಿಶೇಷ ನಿರ್ದೇಶಕರ ಲಂಚ ಪ್ರಕರಣದ ಮತ್ತು ನಿಮ್ಮ ಸರಕಾರಕ್ಕೆ ಮುಜುಗರ ಉಂಟುಮಾಡಬಹುದಾಗಿದ್ದ ಇತರ ಅನೇಕ ಪ್ರಕರಣಗಳ ತನಿಖೆಯನ್ನು ತಡೆಯುವ ಉದ್ದೇಶದಿಂದ ಆತುರದಿಂದ ಮತ್ತು ಹತಾಶರಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎನ್ನುವುದೇ ಈ ನಡೆಗೆ ನೀಡಬಹುದಾದ ಒಂದು ವಿವರಣೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಎರಡನೆಯದಾಗಿ, ನಿಮಗೆ ಅಥವಾ ಕೇಂದ್ರ ಜಾಗೃತ ದಳಕ್ಕೆ ಸಿಬಿಐ ನಿರ್ದೇಶಕರ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಹಾಗಾಗಿ ಸಿಬಿಐ ನಿರ್ದೇಶಕರ ಉಚ್ಚಾಟನೆ ಅಕ್ರಮ, ದ್ವೇಷದಿಂದ ಕೂಡಿದ್ದಾಗಿದ್ದು ರಫೇಲ್ ಒಪ್ಪಂದ ಸೇರಿದಂತೆ ಇತರ ಹಲವು ಮುಖ್ಯ ತನಿಖೆಗಳನ್ನು ದಾರಿತಪ್ಪಿಸುವ ಉದ್ದೇಶದಿಂದಲೇ ನಡೆಸಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಖರ್ಗೆ, ಮೋದಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಎರಡು ಗಂಟೆ ರಾತ್ರಿಗೆ ಸಿಬಿಐ ಮುಖ್ಯಸ್ಥರನ್ನು ವಜಾಗೊಳಿಸಿ, ಇಡೀ ದಿನ ಅವರ ಮೇಲೆ ಕಣ್ಣಿರಿಸಿ, ರಫೇಲ್ ಒಪ್ಪಂದದಲ್ಲಿ ಸರಕಾರ ನಡೆಸಿದ ಭ್ರಷ್ಟಾಚಾರವನ್ನು ಮರೆಮಾಚಲು ಕಾನೂನಿನ ನಿಯಮಗಳನ್ನೇ ಬದಲಾಯಿಸಲು ಸಂಸ್ಥೆಗಳನ್ನು ಬಳಸಿಕೊಂಡಿದ್ದಾರೆ. ನರೇಂದ್ರ ಮೋದಿ ಮತ್ತು ಅಪರಾಧಗಳಲ್ಲಿ ಅವರ ಜೊತೆಗಾರ ಅಮಿತ್ ಶಾ ಗುಜರಾತ್ ಕಳ್ಳಕಣ್ಣಿರಿಸಿದ್ದು ಈಗಾಗಲೇ ಕುಖ್ಯಾತಿಯಾಗಿದೆ. ಹಾಗಾಗಿ ಇದೀಗ ಗುಪ್ತಚರ ಇಲಾಖೆಯನ್ನು ಉಚ್ಚಾಟಿತ ಅಧಿಕಾರಿಯ ಮೇಲೆ ನಿಗಾಯಿರಿಸಲು ಅವರು ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News