×
Ad

ತೆರಿಗೆಗಳ ಭಾರದಿಂದ ದೇಶದಲ್ಲಿ ದೂರಸಂಪರ್ಕ ಕ್ಷೇತ್ರ ತತ್ತರಿಸುತ್ತಿದೆ: ಏರ್ ಟೆಲ್ ಅಧ್ಯಕ್ಷ ಮಿತ್ತಲ್

Update: 2018-10-25 20:46 IST

ಹೊಸದಿಲ್ಲಿ,ಅ.25: ಅತಿಯಾದ ತೆರಿಗೆಗಳ ಭಾರದಿಂದ ದೂರಸಂಪರ್ಕ ಕ್ಷೇತ್ರವು ನಲುಗುತ್ತಿದೆ ಮತ್ತು ಈ ಕ್ಷೇತ್ರವು ದೇಶದ ಡಿಜಿಟಲ್ ಮಹತ್ವಾಕಾಂಕ್ಷೆಗಳಿಗೆ ತನ್ನ ಕೊಡುಗೆಯನ್ನು ಸಲ್ಲಿಸುತ್ತಿದೆಯಾದರೂ ಅದನ್ನು ತಂಬಾಕು ಉದ್ಯಮದಂತೆ ಭಾವಿಸಿ ತೆರಿಗೆಗಳನ್ನು ಹೇರಲಾಗುತ್ತಿದೆ ಎಂದು ಪ್ರಮುಖ ದೂರಸಂಪರ್ಕ ಸಂಸ್ಥೆ ಭಾರ್ತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಗುರುವಾರ ಇಲ್ಲಿ ವಿಷಾದಿಸಿದರು.

ಭಾರತದ ದೂರಸಂಪರ್ಕ ಕ್ಷೇತ್ರವು ಈಗ ಘನೀಕರಣಗೊಂಡಿದೆ, ಆದರೆ ಇದಕ್ಕಾಗಿ ಅದು ದುಬಾರಿ ಬೆಲೆಯನ್ನು ತೆತ್ತಿದೆ. ಹಲವಾರು ಜನರು ಉದ್ಯೋಗ ವಂಚಿತರಾಗಿದ್ದಾರೆ ಮತ್ತು ಸುಮಾರು 50 ಶತಕೋಟಿ ಡಾ.ಗಳ ಹೂಡಿಕೆಯನ್ನು ತೊಡೆದುಹಾಕಲಾಗಿದೆ ಎಂದರು.

ಇಂಡಿಯಾ ಮೊಬೈಲ್ ಕಾಂಗ್ರೆಸ್ 2018ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು,ನಮ್ಮ ದೇಶದಲ್ಲಿ ಮೊಬೈಲ್ ಕಂಪನಿಗಳು ಗಳಿಸುವ ಪ್ರತಿ 190 ರೂ.ಗಳಲ್ಲಿ ಸುಮಾರು 37 ರೂ.ಗಳು ಒಂದಲ್ಲ ಒಂದು ತೆರಿಗೆ ರೂಪದಲ್ಲಿ ಹೋಗುತ್ತಿವೆ. ಒಂದೆಡೆ ನಾವು ಪ್ರಧಾನಿಯವರ ಡಿಜಿಟಲ್ ಸಮರ್ಥ ಭಾರತದ ಕನಸನ್ನು ಹೊಂದಿದ್ದೇವೆ ಮತ್ತು ಇದಕ್ಕಾಗಿ ಬೃಹತ್ ಹೂಡಿಕೆ ಅಗತ್ಯವಾಗಿದೆ. ಇನ್ನೊಂದೆಡೆ ನಾವು ಭಾರೀ ಸ್ಪೆಕ್ಟ್ರಂ ಶುಲ್ಕಗಳನ್ನು ತೆರಬೇಕಿದೆ ಮತ್ತು ನಮ್ಮ ಪರವಾನಿಗೆ ಶುಲ್ಕಗಳೂ ತೀರ ಹೆಚ್ಚಾಗಿವೆ. ಇದರ ಜೊತೆಗೆ ಶೇ.18 ಜಿಎಸ್‌ಟಿಯನ್ನು ಪಾವತಿಸಬೇಕಿದೆ. ಇಂತಹ ಸಂಘರ್ಷದ ಸ್ಥಿತಿಯ ಅಸ್ತಿತ್ವವೇ ನನಗೆ ಅರ್ಥವಾಗುತ್ತಿಲ್ಲ ಎಂದರು.

ಈ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ. ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯು ದ್ವಿತೆರಿಗೆ,ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಿಕೆ ಮತ್ತು ಕ್ಷೇತ್ರದಲ್ಲಿ ಕಾನೂನು ವಿವಾದಗಳಂತಹ ಬಾಕಿಯುಳಿದಿರುವ ಸಮಸ್ಯೆಗಳ ಕಡೆಗೆ ಗಮನ ಹರಿಸಿರುವುದು ಸಮಾಧಾನದ ವಿಷಯವಾಗಿದೆ ಎಂದರು.

ಉದ್ಯಮವು ಈಗ ಸರಿಯಾದ ಸ್ವರೂಪವನ್ನು ಪಡೆದುಕೊಂಡಿದೆ ಎಂದ ಅವರು,ವೊಡಾಫೋನ್-ಐಡಿಯಾ ವಿಲೀನವನ್ನು ಹೊರತುಪಡಿಸಿ ಈ ರೂಪಾಂತರವು ಸಾಮಾನ್ಯ ರೀತಿಯಲ್ಲಿ ನಡೆದಿಲ್ಲ. ಇದು ದುಬಾರಿ ಬೆಲೆಯನ್ನು ಪಡೆದುಕೊಂಡಿದೆ ಎಂದರು.

5ಜಿ ಅನ್ನು ತರಲು ದೂರಸಂಪರ್ಕ ಉದ್ಯಮವು ಸಜ್ಜಾಗಿದೆ ಮತ್ತು ಅದು ಕಳೆದ 24 ವರ್ಷಗಳಲ್ಲಿಯಂತೆ ಯಶಸ್ವಿ ಫಲಿತಾಂಶಗಳನ್ನು ನೀಡಲಿದೆ ಎಂದ ಮಿತ್ತಲ್,ಆದರೆ ಸ್ಪೆಕ್ಟ್ರಂ ಬೆಲೆಗಳು ಮತ್ತು ಶುಲ್ಕಗಳು ನ್ಯಾಯಯುತವಾಗಿರಬೇಕು ಮತ್ತು ಕೈಗೆಟಕುವಂತಿರಬೇಕು,ಜೊತೆಗೆ ಅತಿಯಾದ ತೆರಿಗೆ ಹೇರಿಕೆಯನ್ನು ಕೈಬಿಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News