12ನೇ ತರಗತಿ ಇತಿಹಾಸ ಪಠ್ಯದ ಎರಡು ಅಧ್ಯಾಯ ಹಿಂದೆಗೆಯುವಂತೆ ಶಿರೋಮಣಿ ಅಕಾಲಿ ದಳ ಆಗ್ರಹ
ಚಂಡಿಗಡ, ಅ. 25: ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ 12ನೇ ತರಗತಿ ಇತಿಹಾಸ ಪುಸ್ತಕದಲ್ಲಿ ಸೇರಿಸಲಾದ ಎರಡು ಹೊಸ ಅಧ್ಯಾಯಗಳನ್ನು ಕೂಡಲೇ ಹಿಂದೆಗೆಯುವಂತೆ ಆಗ್ರಹಿಸಿ ಶಿರೋಮನಿ ಅಕಾಲಿ ದಳ ಶುಕ್ರವಾರ ಆಗ್ರಹಿಸಿದೆ.
ಪಠ್ಯದ ಈ ಎರಡು ಅಧ್ಯಾಯಗಳು ಸಿಕ್ಖ್ ಧರ್ಮ ಹಾಗೂ ಗುರುವನ್ನು ಅಮಾನಿಸಿದೆ. ಇತಿಹಾಸವನ್ನು ವಿರೂಪಗೊಳಿಸಿದೆ ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿದೆ. ಆನ್‌ಲೈನ್‌ನಲ್ಲಿ ಬಿಡುಗಡೆಗೊಳಿಸಲಾದ ಎರಡು ಅಧ್ಯಾಯಗಳಲ್ಲಿ ಹಲವು ತಪ್ಪುಗಳು ಇವೆ ಎಂದು ರಾಜ್ಯದ ಮಾಜಿ ಶಿಕ್ಷಣ ಸಚಿವ ದಲ್ಜೀತ್ ಸಿಂಗ್ ಚೀಮಾ ಚಂಡಿಗಢದಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿಕ್ಖ್ ಗುರುವಿಗೆ ಸಂಬಂಧಿಸಿದ ಚಾರಿತ್ರಿಕ ಸತ್ಯ ತಿರುಚುವ ಹಾಗೂ ಸಿಕ್ಖ್ ಗ್ರಂಥಗಳ ಬಗ್ಗೆ ಆಕ್ಷೇಪಾರ್ಹ ನಿಲುವು ವ್ಯಕ್ತಪಡಿಸುವ ದುಷ್ಟ ಪ್ರಯತ್ನ ನಡೆದಿದೆ ಎಂದು ಹೇಳಿದ ಅವರು, ಶಿಕ್ಷಣ ಸಚಿವ ಒ.ಪಿ. ಸೋನಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ವಿರೂಪದೊಂದಿಗೆ ಅಧ್ಯಾಯಗಳನ್ನು ಆನ್‌ಲೈನ್ ಬಿಡುಗಡೆಗೊಳಿಸಿರುವುದಕ್ಕೆ ಹೊಣೆಗಾರರಾದ ಮಂಡಳಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಚೀಮಾ, ಸಿಕ್ಖ್ ಚರಿತ್ರೆಯೊಂದಿಗೆ ಹಾಗೂ ಪಂಚಾಬ್ ರಾಜ್ಯದೊಂದಿಗೆ ಕಾಂಗ್ರೆಸ್ ಸರಕಾರ ಆಟವಾಡಲು ಸಿಕ್ಖ್ ಸಮುದಾಯ ಎಂದು ಅವಕಾಶ ನೀಡದು ಎಂದರು.