ಯಶಸ್ಸಿನ ಬಗ್ಗೆ ಬೇಸರಪಟ್ಟುಕೊಂಡದ್ದು ನಾನು ಮಾತ್ರ ಎನಿಸುತ್ತದೆ: ಟೀನಾ ದಬಿ ಖಾನ್

Update: 2018-10-25 17:21 GMT

ಹೊಸದಿಲ್ಲಿ, ಅ.25: ಐಎಎಸ್ ಟಾಪರ್ ಟೀನಾ ದಬಿ ಖಾನ್ ದೆಹಲಿಯ ಸನ್ಸ್‍ರಾಜ್ ಕಾಲೇಜಿನಲ್ಲಿ ನಡೆದ ಟೆಡ್‍ ಎಕ್ಸ್ ಸಮಾರಂಭದಲ್ಲಿ ತಮ್ಮ ಅಂತರಾಳ ತೆರೆದಿಟ್ಟರು. 2016ರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್ ಗಳಿಸಿದ ತಕ್ಷಣ ಆನ್‍ಲೈನ್ ಕುಹಕಗಳು ದಲಿತ ಹಿನ್ನೆಲೆಯನ್ನು ಕೆದಕಿದಾಗ ಆದ ನೋವು, ಜಿಗುಪ್ಸೆಯನ್ನು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟರು.

"ಮೊದಲ ರ್ಯಾಂಕ್ ಪಡೆದಾಗ ಆದ ಅನುಭವವನ್ನು ಹೇಗೆ ವಿವರಿಸಲು ಆರಂಭಿಸಬೇಕು ಎಂದೂ ತಿಳಿಯುತ್ತಿಲ್ಲ. ವಿಜಯ ಮತ್ತು ಗೆಲುವಿನ ಆ ಭಾವನೆ ನಂಬಲಸಾಧ್ಯ. ಆದರೆ ಅದರ ಇನ್ನೊಂದು ನೋವಿನ ಮುಖವೂ ಇದೆ. ಅದು ಕಠಿಣವಾದ ಭಾಗ. ಯಶಸ್ಸು ನನಗೆ ಹೂಗುಚ್ಛದೊಂದಿಗೆ ಬರಲಿಲ್ಲ. ಮುಕ್ತ ಕೈಗಳಿಂದ ಯಶಸ್ಸು ನನ್ನನ್ನು ಸ್ವಾಗತಿಸಲಿಲ್ಲ" ಎಂದು ಟೀನಾ ಹೇಳಿದರು.

"ಬಹುಶಃ ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಟಾಪರ್ ಆದವರ ಪೈಕಿ ಯಶಸ್ಸಿನ ಬಗ್ಗೆ ಬೇಸರದ ಭಾವನೆ ಆಗಿರುವುದು ನನಗೆ ಮಾತ್ರ ಇರಬೇಕು. ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನನಗೆ ಭಾರತೀಯ ಸಮಾಜ ಎಷ್ಟು ಕ್ರೂರ, ಎಷ್ಟು ಕ್ಷಮಿಸದ ಹಾಗೂ ಅರ್ಥ ಮಾಡಿಕೊಳ್ಳದ ಸಮಾಜ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಒಬ್ಬ ವ್ಯಕ್ತಿಯನ್ನು ಹೇಗೆ ಗುರಿ ಮಾಡಲು ಮತ್ತು ಅವರ ಮೇಲೆ ದಾಳಿ ಮಾಡಲು ಸಾಧ್ಯ ಹಾಗು ಜನರಿಗೆ ಆರಾಮವಾಗಿ ತಮ್ಮ ಮನೆಗಳಲ್ಲಿ ಕುಳಿತು ಇಂಟರ್‍ನೆಟ್ ಮೂಲಕ ಯಾರೋ ಒಬ್ಬರನ್ನು ನಿಂದಿಸುವುದು ಎಷ್ಟು ಸುಲಭ ಎನ್ನುವುದು ನನಗೆ ತಿಳಿಯಿತು"

ದಲಿತ ಹಿನ್ನೆಲೆಯ ಕಾರಣಕ್ಕಾಗಿ ಆನ್‍ಲೈನ್ ಕುಹಕಗಳ ಕಿರುಕುಳದಿಂದ 22ನೇ ವಯಸ್ಸಿನಲ್ಲಿ, ಆಗಷ್ಟೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಯುವತಿಯಾಗಿ ಅನುಭವಿಸಿದ ಮಾನಸಿಕ ಆಘಾತವನ್ನು ಶಬ್ದಗಳಲ್ಲಿ ವಿವರಿಸಲಾಗದು ಎಂದು ಅವರು ಹೇಳಿದರು. ಯುಪಿಎಸ್‍ಸಿ ಪರೀಕ್ಷೆಯಲ್ಲಿ ತಾನು ಸಾಧಿಸಿದ ಅದ್ಭುತ ಯಶಸ್ಸು, ಪರಿಶಿಷ್ಟ ಜಾತಿಯ ಹಿನ್ನೆಲೆಯಲ್ಲಿ ದೊರಕಿದ ಮೀಸಲಾತಿಯ ಲಾಭದಿಂದ ಎಂಬ ಆರೋಪಗಳನ್ನೂ ಎದುರಿಸಬೇಕಾಯಿತು.

"ಇಡೀ ದೇಶದ ಕಣ್ಣು ಹಾಗೂ ಕಿವಿಗಳು ನನ್ನತ್ತ ದಿಢೀರನೇ ನೆಟ್ಟಾಗ ಎಂತಹ ಅನುಭವವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೇಳುತ್ತೇನೆ. ನನಗೆ ಇಡೀ ಜೀವನದಲ್ಲಿ ಎಂದೂ ಇಷ್ಟು ಜವಾಬ್ದಾರಿಯುತ ವ್ಯಕ್ತಿಯಾದೆ ಎಂಬ ಭಾವನೆ ಬರಲೇ ಇಲ್ಲ.. ಅಲ್ಲೇ ಆ ಕ್ಷಣವೇ ನಾನು ನಿರ್ಧರಿಸಿಬಿಟ್ಟೆ. ಯಾವುದೇ  ಋಣಾತ್ಮಕ ಅಂಶಗಳು ಕೂಡಾ ನನ್ನ ಮುಖದ ನಗುವನ್ನು ಅಳಿಸಿಹಾಕಲಾರವು"

"ಮಸ್ಸೂರಿಯ ಎಲ್‍ಬಿಎಸ್‍ಎನ್‍ಎಎ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವೇಳೆ ಜೀವನದ ಸಂಗಾತಿ ಅಖ್ತರ್ ಆಮೀರ್ ಖಾನ್ ಅವರನ್ನು ಭೇಟಿಯಾದೆ. ಅದೇ ವರ್ಷದ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು ಎರಡನೇ ರ್ಯಾಂಕ್ ಪಡೆದಿದ್ದರು. ಭಿನ್ನ ಧರ್ಮ, ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ವ್ಯಕ್ತಿಯನ್ನು ವಿವಾಹವಾಗುವ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ನೀವು ಕಲ್ಪಿಸಿಕೊಳ್ಳಬಹುದು; ನಾನು ಮತ್ತೆ ಬೆಂಕಿಯ ಬಲೆಗೆ ಬಿದ್ದೆ. ನಾನು ಪ್ರತಿಯೊಬ್ಬರನ್ನೂ ಮನವೊಲಿಸಲು ಚಾಕಲೇಟ್ ಬಾಕ್ಸ್ ಅಲ್ಲ ಎನ್ನುವ ವಾಸ್ತವ ನನಗೆ ಅರಿವಾಯಿತು. ನನ್ನ ಮನಸ್ಸಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದೆ" ಎಂದು ವಿವರಿಸಿದರು.

ಟೀನಾ ತಮ್ಮ ಅಂತರ್ ಧರ್ಮೀಯ ವಿವಾಹದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದು ಇದೇ ಮೊದಲು. ಟೀನಾ ಹಾಗೂ ಅಖ್ತರ್ ಅವರು ಈ ವರ್ಷದ ಆರಂಭದಲ್ಲಿ ಎಲ್‍ಬಿಎಸ್‍ಎನ್‍ಎಎನಲ್ಲಿ ತರಬೇತಿ ಮುಂದುವರಿಯುತ್ತಿರುವ ನಡುವೆಯೇ ವಿವಾಹವಾಗಿದ್ದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಲವು ಮಂದಿ ಸಂಪುಟ ಸಚಿವರು, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪಾಲ್ಗೊಳ್ಳುವ ಮೂಲಕ ಇವರ ವಿವಾಹ ದೊಡ್ಡ ಸುದ್ದಿ ಮಾಡಿತ್ತು.

ಟೀನಾ ನಾಗರಿಕ ಸೇವಕರ ಪಾತ್ರದ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು. ವಾಸ್ತವವಾಗಿ ಸಾರ್ವಜನಿಕ ಸೇವಕರು, ಸಾಮಾಜಿಕ ಹೋರಾಟಗಾರರಿಗಿಂತಲೂ ದೊಡ್ಡ ಚಳವಳಿಗಾರರು. "ನನ್ನ ಪ್ರಕಾರ, ಒಬ್ಬ ದಕ್ಷ ನಾಗರಿಕ ಸೇವಾ ಅಧಿಕಾರಿಯನ್ನು ಸಮಾಜದ ಅತ್ಯುನ್ನತ ಸಾಮಾಜಿಕ ಹೋರಾಟಗಾರ ಎಂದು ಪರಿಗಣಿಸಬಹುದು. ಏಕೆಂದರೆ ಸಾಮಾಜಿಕ ಸಕ್ರಿಯತೆ ಆರಂಭವಾಗುವುದು ಸುತ್ತಮುತ್ತಲಿನ ಸಮಾಜವನ್ನು ಮತ್ತು ಜನರನ್ನು ಸಾಮಾಜಿಕ ಕಾರಣಕ್ಕಾಗಿ ಸಕ್ರಿಯಗೊಳಿಸುವ ಮೂಲಕ. ಆದರೆ ನಾಗರಿಕ ಸೇವೆ ಅದಕ್ಕಿಂತ ಹೆಚ್ಚಿನ ಕಾರ್ಯ ಮಾಡುತ್ತದೆ. ಇದು ನಿಮ್ಮನ್ನು ಸಕ್ರಿಯಗೊಳಿಸುವುದು ಮಾತ್ರವಲ್ಲ; ಸರ್ಕಾರದ ಯೋಜನೆಗಳು ಅಥವಾ ನೀತಿಗಳನ್ನು ಪರಿಪೂರ್ಣವಾಗಿ ಜಾರಿಗೊಳಿಸಿದಾಗ ಅದು ಕಣ್ಣಿಗೆ ಕಾಣುವ ಫಲಿತಾಂಶವನ್ನು ತಂದುಕೊಡುತ್ತದೆ" ಎನ್ನುವುದು ಅವರ ಅಭಿಮತ.

ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನಿಯೋಜಿತರಾಗಿರುವ ಟೀನಾ ಹೇಳುವಂತೆ, ಈ ವರ್ಷದ ಅಕ್ಟೋಬರ್‍ನಿಂದ ಐಎಎಸ್ ಅಧಿಕಾರಿಯಾಗಿ ಕಾರ್ಯ ಆರಂಭಿಸಿದ್ದಾರೆ.

ಟೀನಾ ಕಳೆದ ತಿಂಗಳು ಟಿಇಡಿಎಕ್ಸ್ ಉಪನ್ಯಾಸ ನೀಡಿದ್ದು, ಈ ಕುರಿತ ವಿಡಿಯೊವನ್ನು ನಿನ್ನೆಯಷ್ಟೇ ಅವರು ಶೇರ್ ಮಾಡಿದ್ದಾರೆ. "ನನ್ನ ಬಗೆಗಿನ ಟೀಕೆಗಳನ್ನು ನೀವು ಕೇಳಿದ್ದೀರಿ, ಕಥೆಯ ಬಗ್ಗೆ ನನ್ನ ನಿಲುವು ಇಲ್ಲಿದೆ" ಎಂದು ಟೀನಾ ಬರೆದಿದ್ದಾರೆ. ಪೂರ್ಣ ವಿಡಿಯೊವನ್ನು ಯೂಟ್ಯೂಬ್‍ನಲ್ಲಿ ನೋಡಿ: "ವಿಕ್ಟರಿ ಬಿಯಾಂಡ್ ದ ಮೌಂಟೇನ್"

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News