ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ಗೈರು: ಕೋರ್ಟ್ ಎಚ್ಚರಿಕೆ

Update: 2018-10-26 16:48 GMT

  ಮುಂಬೈ,ಅ.26: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಏಳು ಮಂದಿ ಆರೋಪಿಗಳ ಪೈಕಿ ಐದು ಮಂದಿ ವಿಚಾರಣೆಗೆ ಗೈರು ಹಾಜರಾಗಿರುವುದಕ್ಕೆ ವಿಶೇಷ ನ್ಯಾಯಾಲಯವು ಇಂದಿಲ್ಲಿ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ದೋಷಾರೋಪ ಹೊರಿಸುವಿಕೆಯನ್ನು ನ್ಯಾಯಾಲಯ ಅಕ್ಟೋಬರ್ 30ಕ್ಕೆ ಮುಂದೂಡಿದೆ.

  ನ್ಯಾಯಾಲಯಕ್ಕೆ ಗೈರುಹಾಜರಾಗುವ ಮೂಲಕ ವಿಚಾರಣಾ ಕಲಾಪಗಳನ್ನು ವಿಳಂಬಗೊಳ್ಳುವಂತೆ ಆರೋಪಿಗಳು ಮಾಡುತ್ತಿರುವ ಬಗ್ಗೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಪಡಾಲ್ಕರ್ ಎಚ್ಚರಿಕೆ ನೀಡಿದರು.

ಆರೋಪಿಗಳಾದ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್ ಹಾಗೂ ಸಮೀರ್ ಕುಲಕರ್ಣಿ ಅವರನ್ನು ಹೊರತುಪಡಿಸಿ ಉಳಿದ ಐದು ಮಂದಿ ಆರೋಪಿಗಳು ಇಂದು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ.

ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನ್ಯಾಯಾಲಯವು ಮುಂದೂಡಿದ್ದು, ನ್ಯಾಯಾಲಯದ ಆದೇಶವನ್ನು ಅನುಸರಿಸಿ, ವಿಚಾರಣೆಗೆ ಹಾಜರಾಗಲು ಅವರಿಗೆ ಇರುವ ಕೊನೆಯ ಅವಕಾಶ ಇದಾಗಿದೆಯೆಂದು ಅದು ತಿಳಿಸಿದೆ.

 ‘‘ ಆರೋಪಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿರುವ ಹಾಗೆ ಕಾಣುತ್ತಿದೆ. ಒಂದು ವೇಳೆ ಅವರು ಮುಂದಿನ ವಿಚಾರಣೆಯ ದಿನಾಂಕದ ವೇಳೆ ಉಪಸ್ಥಿತರಿರದೆ ಇದ್ದಲ್ಲಿ ಅವರ ವಿರುದ್ಧ ಸೂಕ್ತ ಆದೇಶಗಳನ್ನು ಹೊರಡಿಸಲಾಗುವುದು’’ ಎಂದು ನಾಯಾಧೀಶ ಪಡಾಲ್ಕರ್ ತಿಳಿಸಿದ್ದಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪ ಹೊರಿಸುವುದು ಒಂದು ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ಆನಂತರ ಪ್ರಕರಣದ ವಿಚಾರಣೆ ಆರಂಭಗೊಳ್ಳುತ್ತದೆ.

   ಲೆ.ಕ.ಪುರೋಹಿತ್, ಕುಲಕರ್ಣಿ, ಪ್ರಜ್ಞಾಸಿಂಗ್ ಠಾಕೂರ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್‌ಕರ್, ಸುಧಾಕರ್ ದ್ವಿವೇದಿ ಹಾಗೂ ಸುಧಾಕರ್ ಚತುರ್ವೇದಿ ಪ್ರಕರಣದ ಆರೋಪಿ ಗಳಾಗಿದ್ದಾರೆ. ಈ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ, ಭಯೋತ್ಪಾದನಾ ವಿರೋಧಿ ಕಾನೂನು ಹಾಗೂ ಕ್ರಿಮಿನಲ್ ಸಂಚು, ಮತ್ತು ಕೊಲೆ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಮಸೀದಿಯೊಂದರ ನಡೆದ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು, 79ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಮಧ್ಯೆ, ತನ್ನನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ವಿಚಾರಣೆ ನಡೆಸಲು ಕೆಳನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಕ. ಪುರೋಹಿತ್ ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಸ್ವೀಕರಿಸಲು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ಸಮ್ಮತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News