ಮುಂದಿನ ಪ್ರಧಾನಿ ಯಾರಾಗಬೇಕು?: ಮೋದಿ-ರಾಹುಲ್ ನಡುವೆ ಜನ ಮೆಚ್ಚಿದ್ದು ಯಾರನ್ನು ಗೊತ್ತಾ?

Update: 2018-10-26 17:20 GMT

ಹೊಸದಿಲ್ಲಿ, ಅ.26: ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟು indiatoday.in ತಮಿಳುನಾಡು ಮತ್ತು ಕೇರಳದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿಂದಿಕ್ಕಿದ್ದಾರೆ.

ಇತ್ತೀಚೆಗಷ್ಟೇ indiatoday.in ಪೊಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ಎಂಬ ಸಮೀಕ್ಷೆಯನ್ನು ಆಂಧ್ರ ಪ್ರದೇಶದಲ್ಲೂ ನಡೆಸಿದ್ದು, ಅಲ್ಲೂ ರಾಹುಲ್ ಮೇಲುಗೈ ಸಾಧಿಸಿದ್ದರು. ಇದೇ ವೇಳೆ indiatoday.in ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ಕೇರಳಿಗರ ಅಭಿಪ್ರಾಯ ಸಂಗ್ರಹಿಸಿದೆ. ಮೂರರಲ್ಲಿ ಒಂದು ಭಾಗ ಜನರು ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿ ತಟಸ್ಥ ನಿಲುವನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕೇರಳದಲ್ಲಿ ಪಿಣರಾಯಿ ವಿಜಯನ್ ಹಾಗು ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ಜನಪ್ರಿಯ ರಾಜಕೀಯ ನಾಯಕರು ಎನ್ನುವುದನ್ನು ಸಮೀಕ್ಷೆ ಕಂಡುಕೊಂಡಿದೆ. ಕೇರಳದಲ್ಲಿ 42 ಶೇ. ಜನರು ಪಿಣರಾಯಿ ವಿಜಯನ್ ಸರಕಾರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊಂದಿದ್ದರೆ, 27 ಶೇ. ಜನರು ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇನ್ನುಳಿದ 27 ಶೇ. ಜನರು ‘ಸಾಧಾರಣ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 27 ಶೇ. ಜನರು ಇನ್ನೊಂದು ಅವಧಿಗೂ ಪಿಣರಾಯಿ ವಿಜಯನ್ ಆಡಳಿತ ನಡೆಸಬೇಕು ಎಂದಿದ್ದರೆ, 20 ಶೇ. ಜನರು ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಪರ ಒಲವು ವ್ಯಕ್ತಪಡಿಸಿದ್ದಾರೆ.

"ಮುಂದಿನ ಪ್ರಧಾನಿ ಯಾರಾಗಬೇಕು" ಎಂಬ ಪ್ರಶ್ನೆಗೆ 38 ಶೇ. ಜನರು ರಾಹುಲ್ ಗಾಂಧಿ ಪರ ಒಲವು ವ್ಯಕ್ತಪಡಿಸಿದ್ದರೆ, 31 ಶೇ. ಮಂದಿ ಮೋದಿ ಪ್ರಧಾನಿಯಾಗಬೇಕು ಎಂದಿದ್ದಾರೆ.

ತಮಿಳುನಾಡಿನ ವಿಚಾರಕ್ಕೆ ಬರುವುದಾದರೆ ಎಡಪ್ಪಡಿ ಕೆ. ಪಳನಿಸ್ವಾಮಿ ಸರಕಾರದ ಬಗ್ಗೆ ರಾಜ್ಯದ ಜನರು ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ. 54 ಶೇ. ಮಂದಿ ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. 18 ಶೇ. ಮಂದಿ ಸರಕಾರದ ಪರ ನಿಂತಿದ್ದಾರೆ.

ಇನ್ನೊಂದೆಡೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಪರ ಜನರ ಒಲವು ಹೆಚ್ಚಿದೆ. 41 ಶೇ. ಮಂದಿ ಅವರೇ ಮುಂದಿನ ಸಿಎಂ ಆಗಬೇಕು ಎಂದು ಇಚ್ಛಿಸಿದ್ದಾರೆ. ಕಮಲ್ ಹಾಸನ್ ಪರ 8 ಶೇ. ಮಂದಿ ಹಾಗು ರಜಿನಿಕಾಂತ್ ಪರ 6 ಶೇ. ಮಂದಿ ನಿಂತಿದ್ದಾರೆ.

ಮುಂದಿನ ಪ್ರಧಾನಿ ರಾಹುಲ್ ಗಾಂಧಿಯಾಗಬೇಕೆಂದು ತಮಿಳುನಾಡಿನ 36 ಶೇ. ಮಂದಿ ಬಯಸಿದ್ದರೆ, 29 ಶೇ. ಮಂದಿ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News