ನಟ ಅರ್ಜುನ್ ಸರ್ಜಾಗೆ ಬಂಧನ ಭೀತಿ

Update: 2018-10-27 15:45 GMT

ಬೆಂಗಳೂರು, ಅ.27: ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಟಿ ಶ್ರುತಿ ಹರಿಹರನ್, ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಇಲ್ಲಿನ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅರ್ಜುನ್ ಸರ್ಜಾ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಬಂಧಿಸಿ, ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ನಗರದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಸ್ವತಃ ಶ್ರುತಿ ಹರಿಹರನ್ ಅವರು ಭೇಟಿ ನೀಡಿ 5 ಪುಟಗಳಲ್ಲಿ ದೂರನ್ನು ಪೊಲೀಸರಿಗೆ ಸಲ್ಲಿಸಿದರು. ದೂರಿನನ್ವಯ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು), 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಏನಿದೆ ದೂರಿನಲ್ಲಿ?: ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಒಂದು ದಿನ ಬೆಳಗ್ಗೆ 7:30ರಿಂದ ಸಂಜೆ 6:30ರವರೆಗೆ ಸಿನಿಮಾ ಚಿತ್ರೀಕರಣ ಇತ್ತು. ಈ ವೇಳೆ, ಪತಿ-ಪತ್ನಿ ಪಾತ್ರದ ದೃಶ್ಯ ಇದ್ದ ಕಾರಣ, ಮೊದಲೇ ಅಭ್ಯಾಸ ನಡೆಸುವ ಸಮಯದಲ್ಲಿ ಅರ್ಜುನ್ ಸರ್ಜಾ ಅಸಹ್ಯವಾಗಿ ನನ್ನನ್ನು ನೋಡಿದ್ದರು. ಆಗ ಅರ್ಜುನ್ ಸರ್ಜಾ ಹಿಂಭಾಗದಿಂದ ನನ್ನನ್ನು ಅಪ್ಪಿಕೊಂಡರು. ಇದಕ್ಕೆ ನಾನು ವಿರೋಧಿಸಿದೆ. ಆದರೂ, ನನ್ನ ದೇಹದ ಕೆಲ ಭಾಗವನ್ನು ಸ್ಪರ್ಶಿಸಿ ತೀವ್ರ ಮುಜುಗರವನ್ನು ಉಂಟು ಮಾಡಿದ್ದರು. ಚಿತ್ರೀಕರಣ ಕಾರಣದಿಂದಲೇ ನಾನು ಇದನ್ನೆಲ್ಲ ತಡೆದುಕೊಂಡೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಂತಹ ದೃಶ್ಯವನ್ನು, ಅರ್ಜುನ್ ಸರ್ಜಾ ನಿರ್ದೇಶಕರಿಗೆ ಈ ದೃಶ್ಯವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದೇ ಎಂದು ಕೇಳಿದರು. ಬಳಿಕ ನಾನು ನಿರ್ದೇಶಕರ ಬಳಿ ಹೋಗಿ ಹೀಗೆಲ್ಲಾ ಆದರೆ ನನಗೆ ಕೆಲಸ ಮಾಡಲು ಆಗುವುದಿಲ್ಲ ಎಂದಿದ್ದೆ. ಅರ್ಜುನ್ ಸರ್ಜಾರ ಈ ವರ್ತನೆಯಿಂದ ನನಗೆ ಮುಜುಗರ ಉಂಟಾಗಿ, ನೊಂದಿದ್ದೆ ಎಂದು ಶ್ರುತಿ ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನೊಂದು ದೃಶ್ಯದಲ್ಲಿ ನಾನು ಹಾಸಿಗೆ ಮೇಲೆ ಮಲಗಿರಬೇಕಿತ್ತು. ಈ ದೃಶ್ಯವನ್ನು ದುರುಪಯೋಗಪಡಿಸಿಕೊಂಡು ಕೈ ಎಳೆದು ತಬ್ಬಿಕೊಂಡರು. ಅತ್ಯಂತ ಹತ್ತಿರವಾಗಿ ಬರಲು ನನ್ನನ್ನು ಎಳೆದುಕೊಂಡರು. ಅವರನ್ನು ತಳ್ಳಿ ನಾನು ಹೊರಗೆ ಬಂದೆ. ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ವೇಳೆ ನಾನು ಕಿರುಚಿದೆ, ತುಂಬಾ ಅಳುತ್ತಾ ಕುಳಿತುಕೊಂಡಿದ್ದೆ. ಇದರಿಂದ ನನಗೆ ಬೇಸರ ಉಂಟಾಗಿ ಸಹ ನಿರ್ದೇಶಕ ಭರತ್ ನೀಲಕಂಠರ ಗಮನಕ್ಕೆ ತಂದಿದ್ದೆ. ಆಗ ಅವರು ಅಭ್ಯಾಸ (ರಿಹರ್ಸಲ್) ಬೇಡ ನೇರವಾಗಿ ಚಿತ್ರೀಕರಣದಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ದೇವನಹಳ್ಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆದಿತ್ತು. ಈ ವೇಳೆ ನನ್ನ ಜೊತೆ ಕೆಟ್ಟದಾಗಿ ಅರ್ಜುನ್ ಸರ್ಜಾ ನಡೆದುಕೊಂಡಿದ್ದರು. ರೆಸಾರ್ಟ್ ಇದೆ ಅಲ್ಲಿಗೆ ಬಾ ಎಂದೆಲ್ಲಾ ಆಹ್ವಾನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಶ್ರೀಮತಿ ಶ್ರುತಿ ರಾಮ್‌ಕುಮಾರ್?
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿರುವ ನಟಿ ಶ್ರುತಿ ಹರಿಹರನ್ ಅವರಿಗೆ ವಿವಾಹ ಆಗಿರುವ ಅಂಶ ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯಲ್ಲಿ ಬಹಿರಂಗವಾಗಿದೆ.
ಶ್ರುತಿ, ದೂರಿನಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ಪತಿ/ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಇದರೊಂದಿಗೆ ಶ್ರುತಿ ಅವರಿಗೆ ಮದುವೆ ಆಗಿದೆ ಅಂಶ ಬಹಿರಂಗವಾಗಿದೆ. ಅಲ್ಲದೆ, ಶ್ರುತಿ ಹರಿಹರನ್‌ಗೆ ಮದುವೆ ಆಗಿದೆಯೇ ಇಲ್ಲವೇ ಎಂಬುವುದು ಈಗಲೂ ಗುಟ್ಟಾಗಿಯೇ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕ್ರಮ ಕೈಗೊಳ್ಳಲಾಗುವುದು ಎಂದ ಅಧಿಕಾರಿ
ಮಹಿಳಾ ಎಸ್ಸೈ ಸಮ್ಮುಖದಲ್ಲೇ ಶ್ರುತಿ ಹರಿಹರನ್ ಅವರ ದೂರು ದಾಖಲು ಮಾಡಿಕೊಂಡು, ಎಫ್‌ಐಆರ್ ದಾಖಲಿಸಿದ್ದೇವೆ. ಶ್ರುತಿ, ಇಬ್ಬರು ಸಾಕ್ಷಿಗಳಾದ ಬೋರೇಗೌಡ, ಕಿರಣ್ ಎಂದು ಹೆಸರುಗಳನ್ನು ದೂರಿನಲ್ಲಿ ಉಲ್ಲೇಖ ಮಾಡಿದ್ದು, ಅವರನ್ನು ವಿಚಾರಣೆ ಮಾಡಲಾಗುವುದು. ಬಳಿಕ ಅರ್ಜುನ್ ಸರ್ಜಾ, ಅವರನ್ನು ಬಂಧಿಸುವ ಅಥವಾ ನೋಟಿಸ್ ನೀಡುವ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಗರದ ಉಪ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸ್ಥಳ ಮಹಜರು ಮಾಡಿದ ಪೊಲೀಸರು’
ಶ್ರುತಿ ಹರಿಹರನ್ ದೂರಿನನ್ವಯ ಶನಿವಾರ ಮಧ್ಯಾಹ್ನ, ನಗರದ ಯುಬಿ ಸಿಟಿ ಹಾಗೂ ಅರಮನೆ ಮೈದಾನ ವ್ಯಾಪ್ತಿಯಲಿ್ಲ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಸ್ಥಳ ಮಹಜರು ಮಾಡಿ, ಮಾಹಿತಿ ದಾಖಲು ಮಾಡಿದರು. ಈ ವೇಳೆ, ಸ್ವತಃ ಶ್ರುತಿ ಹರಿಹರನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News