ಭಾರತಕ್ಕೆ ಬರಲಿದ್ದಾರೆ ಆಮಿರ್ ಖಾನ್‌ರ ಚೀನಾ ಅಭಿಮಾನಿಗಳು

Update: 2018-10-28 11:29 GMT

ಜನಪ್ರಿಯ ನಟ ಆಮಿರ್ ಖಾನ್ ಅವರ ಮುಂಬರುವ ‘ಥಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರ ವೀಕ್ಷಿಸಲು ಆಮಿರ್ ಖಾನ್ ಅವರ ಚೀನಾ ಅಭಿಮಾನಿಗಳು ಭಾರತಕ್ಕೆ ಆಗಮಿಸಲಿದ್ದಾರೆ. ಈ ಚಿತ್ರ ಭಾರತದಲ್ಲಿ ಮೊದಲು ಬಿಡುಗಡೆಯಾಗಿ, ಆನಂತರ ಚೀನಾದಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದ ಕೂಡಲೇ ವೀಕ್ಷಿಸಬೇಕೆಂದು ಚೀನಾದ ಆಮಿರ್ ಖಾನ್ ಅಭಿಮಾನಿಗಳ ಆಸೆ. ಆಮಿರ್ ಖಾನ್ ಚಿತ್ರಗಳೆಂದರೆ ಚೀನಾ ಅಭಿಮಾನಿಗಳಿಗೆ ತುಂಬಾ ಇಷ್ಟ. ಈ ಬಾರಿ ಅವರು ಚಿತ್ರ ವೀಕ್ಷಿಸಲು ವಿಮಾನದ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ. ಆಮಿರ್ ಖಾನ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ, ಮುಖ್ಯವಾಗಿ ಚೀನಾದಲ್ಲಿ ಅತ್ಯಧಿಕ ಜನಪ್ರಿಯರಾಗಿದ್ದಾರೆ. ಜಗತ್ತಿನ ಎರಡನೇ ಅತಿ ದೊಡ್ಡ ಚಲನಚಿತ್ರ ಮಾರುಕಟ್ಟೆ ಚೀನಾ.

ಜಗತ್ತಿನಲ್ಲಿ ಆಮಿರ್ ಖಾನ್ ಅತಿ ದೊಡ್ಡ ಸೂಪರ್ ಸ್ಟಾರ್ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಅವರ ಈ ಹಿಂದಿನ ಮೂರು ಚಿತ್ರಗಳು ಜಾಗತಿಕ ದಾಖಲೆ ನಿರ್ಮಿಸಿದ್ದವು. ಪಿಕೆ (2014), ದಂಗಲ್ (2016) ಹಾಗೂ ಸೀಕ್ರೆಟ್ ಸೂಪರ್‌ಸ್ಟಾರ್ (2017) ಈ ಮೂರು ಚಿತ್ರಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಗಳಿಸಿದ ಟಾಪ್ ಐದು ಚಿತ್ರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಚೀನಾ ಬಾಕ್ಸ್ ಆಫೀಸಿನಲ್ಲಿ ‘ದಂಗಲ್’ 1908 ಕೋ. ರೂ., ಸೀಕ್ರೆಟ್ ಸೂಪರ್‌ಸ್ಟಾರ್ 874 ಕೋ. ರೂ. ಗಳಿಸಿದೆ. ಚೀನಾದಲ್ಲಿ ಬಿಡುಗಡೆಯಾಗಿದ್ದ ಅವರ ಮೊದಲ ಚಿತ್ರ 861 ಕೋ. ರೂ. ಗಳಿಸಿತ್ತು. ಆಮಿರ್ ಖಾನ್ ಅವರ ಚಿತ್ರಗಳು ನಿರ್ದಿಷ್ಟ ಪ್ರಾಯ ಅಥವಾ ವಲಯಕ್ಕೆ ಸೀಮಿತಗೊಂಡಿಲ್ಲ. ಆದುದರಿಂದ ಅವರ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News