ಅಮ್ಮಚ್ಚಿ ಯೆಂಬ ನೆನಪು, ಜೀವನ ಯಜ್ಞ ತೆರೆಗೆ ಸಿದ್ಧ

Update: 2018-10-28 11:50 GMT

ಕರಾವಳಿ ಮೂಲದ ಎರಡು ಹೊಸ ಕನ್ನಡ ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಏಪ್ರಾನ್ ಸಂಸ್ಥೆಯ ‘ಅಮ್ಮಚ್ಚಿಯೆಂಬ ನೆನಪು’ ಹಾಗೂ ಕೆ.ಆರ್.ಎಸ್.ಕುಡ್ಲ ಕಂಬೈನ್ಸ್ ಅವರ - ‘ಜೀವನ ಯಜ್ಞ’ ಚಿತ್ರಗಳು ನವೆಂಬರ್‌ನಲ್ಲಿ ತೆರೆ ಕಾಣಲಿವೆ. ಖ್ಯಾತ ಲೇಖಕಿ ಡಾ.ವೈದೇಹಿ ಅವರ ಅಮ್ಮಚ್ಚಿಯೆಂಬ ನೆನಪು, ಅಕ್ಕು ಮತ್ತು ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು- ಮೂರು ಕಥೆಗಳ ಆಧಾರಿತ ಚಿತ್ರ ‘ಅಮ್ಮಚ್ಚಿಯೆಂಬ ನೆನಪು’ ಹೆಸರಿನಲ್ಲಿ ನಿರ್ಮಾಣಗೊಂಡಿದ್ದು, ನ.1 ರಂದು ರಾಜ್ಯದಾದ್ಯಂತ ಬಿಡುಗಡೆ ಯಾಗಲಿದೆ. ಶೇ.99 ರಂಗಭೂಮಿಯ ಕಲಾವಿದರೇ ಇರುವ ಈ ಚಿತ್ರವನ್ನು ಚಂಪಾ ಪಿ.ಶೆಟ್ಟಿ ನಿರ್ದೇಶಿಸಿದ್ದಾರೆ. ಕುಂದಾಪುರ ಕನ್ನಡದ ಪ್ರಾದೇಶಿಕ ಭಾಷಾ ಸೊಗಡಿನ ಚಿತ್ರದ ಪೂರ್ಣ ಸಂಭಾಷಣೆಯನ್ನು ಸ್ವತಃ ವೈದೇಹಿಯವರೇ ಬರೆದಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ.ಶೆಟ್ಟಿ ಈ ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದೂಸ್ಥಾನಿ ಗುರು ಪಂ.ಕಾಶಿನಾಥ್ ಪತ್ತಾರ್ ಸಂಗೀತ ನಿರ್ದೇಶನವಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೇಖಕಿ ವೈದೇಹಿ, ತನ್ನ ಮೂರು ಕತೆಗಳನ್ನು ಜೋಡಿಸಿ ‘ಅಕ್ಕು’ ಹೆಸರಿನಲ್ಲಿ ನಾಟಕ ಪ್ರಸ್ತುತಪಡಿಸಿ ಯಶಸ್ವಿಯಾದ ತಂಡವೇ ಇದನ್ನು ಚಲನಚಿತ್ರ ರೂಪಕ್ಕೆ ಪರಿಣಾಮಕಾರಿ ರೀತಿಯಲ್ಲಿ ರೂಪಾಂತರಿಸಿದೆ. ಕತೆಯ ಮೂಲ ಆಶಯಕ್ಕೆ ಧಕ್ಕೆ ತರದ ರೀತಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.

ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಮಾತನಾಡಿ, ಎಪ್ಪತ್ತರ ದಶಕದ ಸಾಮಾಜಿಕ ಘಟನೆಯ ಹಿನ್ನೆಲೆ, ಸ್ತ್ರೀ ಸ್ವಾತಂತ್ರ ಹಾಗೂ ಸೂಕ್ಷ್ಮ ಸಂವೇದನೆ ಯನ್ನು ಚಿತ್ರ ಒಳಗೊಂಡಿದೆ ಎಂದು ಹೇಳಿದರು. ಕಲಾವಿದರಾದ ರಾಜ್ ಬಿ.ಶೆಟ್ಟಿ, ಚಂದ್ರಹಾಸ ಉಳ್ಳಾಲ್, ವೈಜಯಂತಿ ಅಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ.2ರಂದು ಜೀವನ ಯಜ್ಞ ಬಿಡುಗಡೆ

‘ಜೀವನ ಯಜ್ಞ’ ನ.2 ರಂದು ರಾಜ್ಯದ 100ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿದೆ. ಶಿವು ಸರಳೇಬೆಟ್ಟು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಕಿರಣ್ ರೈ, ಇದೊಂದು ನಾಲ್ಕು ಅನಾಥ ಮಕ್ಕಳ ಕತೆ. ಶಿಕ್ಷಣ, ಧರ್ಮ, ಜೀವನ ಪದ್ಧತಿ, ಆರ್ಥಿಕ ಪರಿಸ್ಥಿತಿ ಮತ್ತು ಸಮಾಜ ಇವರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಕತೆ ಸಾರುತ್ತದೆ. ರಮೇಶ್ ಭಟ್, ಬಿ.ಜಯಶ್ರೀ, ಮನೋಜ್ ಪುತ್ತೂರು, ಶೈನ್ ಶೆಟ್ಟಿ, ಆದ್ಯಾ ಆರಾಧನ್, ಸಂದೀಪ್‌ಶೆಟ್ಟಿ ಮಾಣಿಬೆಟ್ಟು, ವಸಂತ ಮುನಿಯಾಲ್, ಎಂ.ಕೆ.ಮಠ, ಸೌಜನ್ಯಾ ಹೆಗ್ಡೆ ಮುಂತಾದವರು ತಾರಾಗಣದಲ್ಲಿದ್ದಾರೆ ಎಂದರು. ನಿರ್ಮಾಪಕ ರಂಜನ್ ಶೆಟ್ಟಿ, ಕಾರ್ಯಕಾರಿ ನಿರ್ದೇಶಕ ವಿಕಾಸ್, ಸಂಗೀತ ನಿರ್ದೇಶಕ ಆಶ್ಲೇ ಮೈಕಲ್, ಅನ್ವಿತಾ ಸಾಗರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News