ರಾಕೇಶ್ ಆಸ್ತಾನರನ್ನು ಗುರುವಾರದ ತನಕ ಬಂಧಿಸುವ ಹಾಗಿಲ್ಲ: ದಿಲ್ಲಿ ಹೈಕೋರ್ಟ್

Update: 2018-10-29 11:01 GMT

ಹೊಸದಿಲ್ಲಿ, ಅ.29: ಕಳೆದ ವಾರ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಜತೆಗೆ ರಜೆಯ ಮೇಲೆ ಕಳುಹಿಸಲ್ಪಟ್ಟ ಹಾಗೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಗುರುವಾರದ ತನಕ ಬಂಧಿಸುವ ಹಾಗಿಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ಹೇಳಿದೆ.

ಅಸ್ತಾನ ತಮ್ಮ ವಿರುದ್ಧದ ಆರೋಪಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಸ್ತಾನ ವಿರುದ್ಧದ ತನಿಖೆಯಲ್ಲಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ನ್ಯಾಯಾಲಯ ಸಿಬಿಐಗೆ ಹೇಳಿದೆ. ಕಳೆದ ವಾರ ನ್ಯಾಯಾಲಯವು ಅಸ್ತಾನ ಅವರಿಗೆ ಇಂದಿನ ತನಕ ಬಂಧನದಿಂದ ವಿನಾಯಿತಿ ನೀಡಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಅಸ್ತಾನ ಮತ್ತು ಇನ್ನೊಬ್ಬರು ಅಧಿಕಾರಿ  ಸಲ್ಲಿಸಿರುವ  ಅಪೀಲುಗಳಿಗೆ ಉತ್ತರ ನೀಡದೇ ಇರುವ ಬಗ್ಗೆ ಇಂದು ಜಸ್ಟಿಸ್ ನಜ್ಮಿ ವಝೀರಿ ಅವರ ನೇತೃತ್ವದ ಪೀಠ ಸಿಬಿಐ ಅನ್ನು ಪ್ರಶ್ನಿಸಿತು. ಅಸ್ತಾನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಹೊಸ ತಂಡವನ್ನು ರಚಿಸಿರುವುದರಿಂದ ಉತ್ತರ ನೀಡಲು ಹೆಚ್ಚಿನ ಸಮಯಾವಕಾಶವನ್ನು ಸಿಬಿಐ ಕೋರಿದೆ. ಗುರುವಾರ ಅಥವಾ ಅದಕ್ಕಿಂತ ಮುಂಚೆ ತನ್ನ ಉತ್ತರ ನೀಡುವಂತೆ ನ್ಯಾಯಾಲಯ ಸಿಬಿಐಗೆ ಹೇಳಿದೆ.

ಸಿಬಿಐ ತನಿಖೆ ಎದುರಿಸುತ್ತಿರುವ ಹೈದರಾಬಾದ್ ಮೂಲದ ಉದ್ಯಮಿಯಿಂದ ತಾನು ಲಂಚ ತಗೆದುಕೊಂಡಿಲ್ಲ ಬದಲಾಗಿ ಸಿಬಿಐ ನಿರ್ದೇಶಕ ಅಲೋಕ್ ವರ್ಮ ತಗೊಂಡಿದ್ದರು ಎಂದು ರಾಕೇಶ್ ಅಸ್ತಾನ  ಹಿಂದೆ ಮುಖ್ಯ ಜಾಗೃತ ಆಯೋಗಕ್ಕೆ ಪತ್ರ ಬರೆದಿದ್ದರು.

ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಆಸ್ತಾನ ಸುಪ್ರೀಂ ಕೋರ್ಟಿಗೆ ಹೋಗಿದ್ದರೂ ನ್ಯಾಯಾಲಯ ಇನ್ನೂ ಆ ಬಗ್ಗೆ ಏನೂ ತೀರ್ಪು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News