ಸುಲಿಗೆಗಾಗಿ ಕುಟುಕು ಕಾರ್ಯಾಚರಣೆ ಆರೋಪ: ಸುದ್ದಿ ವಾಹಿನಿ ಸಿಇಒ ಬಂಧನ

Update: 2018-10-29 17:09 GMT

ಗಾಝಿಯಾಬಾದ್/ಡೆಹ್ರಾಡೂನ್, ಅ. 29: ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಸಹಿತ ಪ್ರಮುಖ ರಾಜಕಾರಣಿಗಳ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸುವಂತೆ ತನ್ನ ಸಂಸ್ಥೆಯ ಓರ್ವ ಉದ್ಯೋಗಿಗೆ ಒತ್ತಡ ಹೇರಿದ ಆರೋಪದಲ್ಲಿ ಉತ್ತರಾಖಂಡದ ಸುದ್ದಿ ವಾಹಿನಿಯೊಂದರ ಪ್ರಧಾನ ಸಂಪಾದಕ ಹಾಗೂ ಸಿಇಒ ಅನ್ನು ಗಾಝಿಯಾಬಾದ್‌ನಲ್ಲಿರುವ ಅವರ ನಿವಾಸದಿಂದ ರವಿವಾರ ಬಂಧಿಸಲಾಗಿದೆ. ನೋಯ್ಡಾದಲ್ಲಿರುವ ಕಚೇರಿ ಹಾಗೂ ಗಾಝಿಯಾಬಾದ್‌ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಗಾಝಿಯಾಬಾದ್‌ನ ನಿವಾಸದಿಂದ ಸಮಾಚಾರ್ ಪ್ಲಸ್‌ನ ಸಿಇಒ ಉಮೇಶ್ ಕುಮಾರ್ ಅವರನ್ನು ಬಂಧಿಸಲಾಯಿತು ಎಂದು ಎಡಿಜಿ (ಕಾನೂನು ಹಾಗೂ ಸುವ್ಯವಸ್ಥೆ) ಅಶೋಕ್ ಕುಮಾರ್ ತಿಳಿಸಿದ್ದಾರೆ.

 ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಕಾರ್ಯಾಚರಿಸುತ್ತಿರುವ ಸಮಾಚಾರ್ ಪ್ಲಸ್ ವಾಹಿನಿ 2016ರಲ್ಲಿ ಸುದ್ದಿಯಲ್ಲಿತ್ತು. ಅತೃಪ್ತ ಶಾಸಕರು ಮುಖ್ಯಮಂತ್ರಿ ಹರೀಶ್ ರಾವತ್ ಅವರೊಂದಿಗೆ ಲಂಚಕ್ಕೆ ಸಂಬಂಧಿಸಿ ಅನುಸಂಧಾನ ಮಾಡುತ್ತಿರುವುದು ಹಾಗೂ ರಾಜ್ಯ ವಿಧಾನ ಸಭೆಯ ವಿಶ್ವಾಸಮತ ಸಾಬೀತುಪಡಿಸುವ ಮುನ್ನ ಅವರ ಬೆಂಬಲ ಖರೀದಿಸುವುದನ್ನು ಪ್ರಸಾರ ಮಾಡಿ ವಾಹಿನಿ ಸುದ್ದಿ ಮಾಡಿತ್ತು. ರಾಜ್ಯದ ಹಿರಿಯ ಅಧಿಕಾರಿಗಳು ಹಾಗೂ ಪ್ರಮುಖ ರಾಜಕಾರಣಿಗಳ ಬಗ್ಗೆ ಕುಟುಕು ಕಾರ್ಯಾಚರಣೆ ಮಾಡದೇ ಇದ್ದರೆ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಆರೋಪಿಸಿ ವಾಹಿನಿಯ ಪತ್ರಕರ್ತ ಆಯುಷ್ ಗೌಡ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಶರ್ಮಾ ಅವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News