“ಕಾಶ್ಮೀರವನ್ನು ಪ್ರೀತಿಸುತ್ತಿದ್ದ, ವೃದ್ಧ ತಾಯಿಯ ಪ್ರೀತಿಯ ಮಗನನ್ನು ನೀವು ಕೊಂದಿರಿ”
ಶ್ರೀನಗರ, ಅ.29: “ಕಾಶ್ಮೀರವನ್ನು ಪ್ರೀತಿಸಿದ್ದ ವ್ಯಕ್ತಿಯನ್ನು ನೀವು ಕೊಂದಿದ್ದೀರಿ.. ಬನ್ನಿ ನಮ್ಮೆಲ್ಲರನ್ನೂ ಕೊಲ್ಲಿ” ಇದು ಉಗ್ರರಿಂದ ಕೊಲ್ಲಲ್ಪಟ್ಟ ಪೊಲೀಸ್ ಅಧಿಕಾರಿ ಇಮ್ತಿಯಾಝ್ ಮಿರ್ ಅವರ ಫೇಸ್ ಬುಕ್ ಖಾತೆಯಲ್ಲಿ ಸೋಮವಾರ ಕಂಡುಬಂದ ಪೋಸ್ಟ್. ಇಮ್ತಿಯಾಝ್ ಅವರ ಹತ್ಯೆಯ ದುಃಖವನ್ನು ವ್ಯಕ್ತಪಡಿಸಲು ಸಂಬಂಧಿಯೊಬ್ಬರು ಈ ಪೋಸ್ಟ್ ಮಾಡಿದ್ದಾರೆ.
“ಸಬ್ ಇನ್ ಸ್ಪೆಕ್ಟರ್ ಇಮ್ತಿಯಾಝ್ ಮಿರ್ ಅವರ ಕೊಲೆಗಾರರಿಗೆ ಬಹಿರಂಗ ಪತ್ರ” ಎಂದು ಬರೆಯಲಾಗಿದ್ದು, ಇಮ್ತಿಯಾಝ್ ರ ಫೇಸ್ ಬುಕ್ ಖಾತೆಯಲ್ಲೇ ಈ ಪೋಸ್ಟ್ ಹಾಕಲಾಗಿದೆ. “ನೀವು ವೃದ್ಧ ತಾಯಿಯೊಬ್ಬರ ಪ್ರೀತಿಯ ಮಗನನ್ನು ಮತ್ತು ವೃದ್ಧ ತಂದೆಯೊಬ್ಬರ ವಿಧೇಯ ಪುತ್ರನನ್ನು ಕೊಂದಿದ್ದೀರಿ. ಒಬ್ಬ ಸಹೋದರ ಮತ್ತು ಸಹೋದರಿಗೆ ಏಕೈಕ ಜೊತೆಗಾರನಾಗಿದ್ದ ಸಹೋದರನನ್ನು ನೀವು ಕೊಂದಿದ್ದೀರಿ. ನೀವು ಆತನನ್ನು ವಿವಾಹವಾಗಲು ಬಯಸಿದ್ದ ಯುವತಿಯೊಬ್ಬಳ ಎಲ್ಲಾ ಕನಸುಗಳನ್ನು ಕೊಂದಿದ್ದೀರಿ. ಅತೀ ಮುಖ್ಯವಾಗಿ ನೀವು ಕಾಶ್ಮೀರವನ್ನು ಮತ್ತು ಇಲ್ಲಿಯ ಜನರನ್ನು ಪ್ರೀತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಂದಿದ್ದೀರಿ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
“ಆದರೆ ಆತನನ್ನು ಕೊಂದಾಗ ನೀವೇಕೆ ನಮ್ಮನ್ನು ಕೊಲ್ಲಲಿಲ್ಲ.. ಆತನ ತಾಯಿ, ತಂದೆ, ಸಹೋದರಿ, ಸಹೋದರ ಮತ್ತು ಆತನ ಜೊತೆ ತನ್ನ ಬದುಕನ್ನು ಕಳೆಯಬೇಕೆಂದಿದ್ದ ಯುವತಿಯನ್ನೇಕೆ ನೀವು ಕೊಲ್ಲಲಿಲ್ಲ.. ಅವನಿಲ್ಲದೆ ಬದುಕಲು ನಮಗೆ ಸಾಧ್ಯವಿಲ್ಲ” ಎಂದು ಪೋಸ್ಟ್ ನಲ್ಲಿ ಪ್ರಶ್ನಿಸಲಾಗಿದೆ.
ತನ್ನ ತಂದೆ ತಾಯಿಯನ್ನು ಭೇಟಿಯಾಗುವ ಸಲುವಾಗಿ ಮಾರುವೇಷದಲ್ಲಿ ಹುಟ್ಟೂರಿಗೆ ಆಗಮಿಸಿದ್ದ ಇಮ್ತಿಯಾಝ್ ರನ್ನು ಉಗ್ರರು ಅಪಹರಿಸಿ ಕೊಂದಿದ್ದರು.