ಶಬರಿಮಲೆ ವಿವಾದ: ಕೇರಳ ಕಾಂಗ್ರೆಸ್ ಘಟಕದ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ ರಾಹುಲ್ ಗಾಂಧಿ

Update: 2018-10-30 18:04 GMT

ಇಂದೋರ,ಅ.30: ಎಲ್ಲ ವಯೋಮಾನಗಳ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಾವಕಾಶ ದೊರೆಯಬೇಕು ಎಂದು ಮಂಗಳವಾರ ಇಲ್ಲಿ ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪಕ್ಷದ ಕೇರಳ ಘಟಕದ ನಿಲುವಿಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಈ ಭಾವನಾತ್ಮಕ ವಿಷಯದಲ್ಲಿ ತನ್ನ ಅಭಿಪ್ರಾಯವು ಪಕ್ಷದ ಧೋರಣೆಗಿಂತ ಭಿನ್ನವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಅವರು,ಮಹಿಳೆಯರು ಮತ್ತು ಪುರುಷರು ಸಮಾನರು ಎನ್ನುವದು ಶಬರಿಮಲೆ ವಿವಾದ ಕುರಿತು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಎಲ್ಲ ಮಹಿಳೆಯರಿಗೂ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅನುಮತಿ ದೊರೆಯಬೇಕು. ಆದರೆ ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಭಾವನಾತ್ಮಕ ವಿಷಯವಾಗಿದೆ ಎನ್ನುವುದು ತನ್ನ ಪಕ್ಷದ ಕೇರಳ ಘಟಕದ ಅಭಿಪ್ರಾಯವಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಈ ವಿಷಯದಲ್ಲಿ ತನ್ನ ಪಕ್ಷವು ಕೇರಳಿಗರ ಭಾವನೆಗಳನ್ನು ಪ್ರತಿನಿಧಿಸುತ್ತಿದೆ ಎಂದರು.

ಅತ್ತ ತಿರುವನಂತಪುರದಲ್ಲಿ ರಾಹುಲ್ ಹೇಳಿಕೆಯನ್ನು ಸ್ವಾಗತಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಶಬರಿಮಲೆ ವಿಷಯದಲ್ಲಿ ಕೇರಳದ ಕಾಂಗ್ರೆಸ್ ಘಟಕವು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕಿಂತ ಭಿನ್ನವಾದ ಅಭಿಪ್ರಾಯ ಹೊಂದಿರುವದು ದುರದೃಷ್ಟಕರ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News