ಅಸ್ತಾನಾ ವಿರುದ್ಧ ಕಾನೂನುಕ್ರಮ ಕುರಿತು ಯಥಾಸ್ಥಿತಿ ಆದೇಶ ನ.14ರವರೆಗೆ ವಿಸ್ತರಣೆ
ಹೊಸದಿಲ್ಲಿ,ನ.1: ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಕಾನೂನು ಕ್ರಮ ಕುರಿತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸಿಬಿಐಗೆ ಸೂಚಿಸಿರುವ ತನ್ನ ಆದೇಶವನ್ನು ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯವು ನ.14ರವರೆಗೆ ವಿಸ್ತರಿಸಿದೆ.
ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಮತ್ತು ಅಸ್ತಾನಾ ಅವರ ನಡುವಿನ ಕಲಹದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಜಬಲಪುರಕ್ಕೆ ವರ್ಗಾವಣೆಗೊಂಡಿರುವ ಹೆಚ್ಚುವರಿ ಎಸ್‌ಪಿ ಎಸ್.ಎಸ್.ಗುರಮ್ ಅವರು ಈ ವಿಷಯದಲ್ಲಿ ತನ್ನ ಅಹವಾಲು ಆಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸಿಬಿಐ ಮತ್ತು ಅಸ್ತಾನಾ ಪರ ವಕೀಲರು ವಿರೋಧಿಸಿದರು.
ಗುರುವಾರದ ಕಲಾಪವು ಇಬ್ಬರು ವಕೀಲರು ತಾವು ಸಿಬಿಐ ಅನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿಕೊಂಡು ಸೃಷ್ಟಿಸಿದ ವಿವಾದಕ್ಕೆ ಸಾಕ್ಷಿಯಾಯಿತು.
ಅಸ್ತಾನಾ ಪ್ರಕರಣವು ಆ.23ರಂದು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದ ನಂತರ ಗುರುವಾರ ಮೊದಲ ಬಾರಿಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ ಬ್ಯಾನರ್ಜಿ ಅವರು ಸಿಬಿಐ ಪರ ಹಾಜರಾಗುವಂತೆ ತನಗೆ ಸೂಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸಿಬಿಐ ಪರ ನ್ಯಾಯಾಲಯದಲ್ಲಿ ಹಾಜರಾಗುತ್ತಿರುವ ವಕೀಲ ಕೆ.ರಾಘವಾಚಾರ್ಯುಲು ಅವರು ಬ್ಯಾನರ್ಜಿಯವರ ಹಾಜರಾತಿಯನ್ನು ವಿರೋಧಿಸಿ,ಅಸ್ತಾನಾ ಅರ್ಜಿ ಸಲ್ಲಿಸಿದಾಗಿನಿಂದಲೂ ತಾನು ಸಿಬಿಐ ಪರ ವಕೀಲನಾಗಿ ನೇಮಕಗೊಂಡಿದ್ದೇನೆ. ಪ್ರಕರಣದಲ್ಲಿ ತನ್ನನ್ನು ವಿಶೇಷ ಸರಕಾರಿ ಅಭಿಯೋಜಕನನ್ನಾಗಿ ನಿಯೋಜಿಸಲಾಗಿದೆ ಎಂದು ವಾದಿಸಿದರು.
ಬಳಿಕ,ಬ್ಯಾನರ್ಜಿ ತಾನು ಸಕ್ಷಮ ಪ್ರಾಧಿಕಾರದಿಂದ ಸೂಚನೆಯನ್ನು ಪಡೆದುಕೊಂಡು ಇಬ್ಬರಲ್ಲಿ ಯಾರು ಸಿಬಿಐನ್ನು ಪ್ರತಿನಿಧಿಸುತ್ತಾರೆ ಎನ್ನುವುದನ್ನು ತಿಳಿಸುವುದಾಗಿ ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
ಅಸ್ತಾನಾ ವಿರುದ್ಧ ಕಾನೂನು ಕ್ರಮ ಕುರಿತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಅ.23ರಂದು ಸಿಬಿಐಗೆ ಆದೇಶಿಸಿದ್ದ ಉಚ್ಚ ನ್ಯಾಯಾಲಯವು ಅ.29ರಂದು ಅದನ್ನು ನ.1ರವರೆಗೆ ವಿಸ್ತರಿಸಿತ್ತು.
ಇದಕ್ಕೂ ಮುನ್ನ,ತನ್ನ ವಿರುದ್ಧದ ಎಫ್‌ಐಆರ್ ರದ್ದತಿಯನ್ನು ಕೋರಿ ಅಸ್ತಾನಾ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿದ ಸಿಬಿಐ,ಅವರ ಮತ್ತು ಇತರರ ವಿರುದ್ಧದ ಆರೋಪಗಳು ಸಂಜ್ಞೇಯ ಅಪರಾಧ(ದಂಡಾಧಿಕಾರಿಯ ಅನುಮತಿಯಿಲ್ಲದೆ ಪೊಲೀಸರು ಬಂಧಿಸಬಹುದಾದ ಅಪರಾಧ)ಗಳನ್ನು ಸೂಚಿಸುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.