ರಾಮ ಮಂದಿರಕ್ಕಾಗಿ ಅಗತ್ಯಬಿದ್ದರೆ 1992ರ ಮಾದರಿಯ ಹೋರಾಟ ನಡೆಸಲಾಗುವುದು: ಆರೆಸ್ಸೆಸ್

Update: 2018-11-02 10:27 GMT

ಮುಂಬೈ, ನ.2: “ಅಗತ್ಯಬಿದ್ದರೆ ಆರೆಸ್ಸೆಸ್ 1992ರ ಮಾದರಿಯ ಹೋರಾಟವನ್ನು ರಾಮ ಮಂದಿರಕ್ಕಾಗಿ ನಡೆಸುವುದು'' ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಹೇಳಿದ್ದಾರೆ.

ಆರೆಸ್ಸೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯ ಕೊನೆಯ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮೇಲಿನಂತೆ ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಗೆ ಬೇಡಿಕೆಯಿಡುವವರು ತಮ್ಮ ಆಗ್ರಹ ಮುಂದಿಡುತ್ತಾರೆ, ಆದರೆ ಅಂತಿಮವಾಗಿ ಈ ಕುರಿತಾದ ನಿರ್ಧಾರ ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದರು.

ರಾಮ ಮಂದಿರಕ್ಕಾಗಿ ಆರೆಸ್ಸೆಸ್ ಬೇಡಿಕೆಯನ್ನು ಪುನರುಚ್ಛರಿಸಿದ ಅವರು ಸುಪ್ರೀಂ ಕೋರ್ಟ್ ಸಾರ್ವಜನಿಕರ ಭಾವನೆಗಳನ್ನಾಧರಿಸಿ ತೀರ್ಪು ನೀಡಬೇಕೆಂದು ಹೇಳಿದರು. “ರಾಮ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ ಹಾಗೂ ದೇವಳಗಳ ಮೂಲಕ ಜನರನ್ನು ತಲುಪುತ್ತಾನೆ. ದೇವಳ ನಿರ್ಮಾಣವಾಗಬೇಕು. ಈ ಹಾದಿಯಲ್ಲಿ ಅಡ್ಡಿಗಳಿದ್ದರೂ  ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ಹಿಂದೂಗಳ ಭಾವನೆಗಳನ್ನು ಪರಿಗಣಿಸುವುದೆಂದು ನಂಬಿದ್ದೇನೆ'' ಎಂದು ಜೋಷಿ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಕೇವಲ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಗೆ ಸೀಮಿತವಲ್ಲ. ಅದು ಆತ್ಮ ಗೌರವ ಮತ್ತು ಹೆಮ್ಮೆಯ ಸಂಕೇತ. ಸರ್ದಾರ್ ಪಟೇಲ್ ಅವರು ಸೋಮನಾಥ ದೇವಳವನ್ನು ಪುನರ್ನಿರ್ಮಾಣ ಮಾಡಿದಂತೆ ಸರಕಾರ ರಾಮ ಮಂದಿರ ನಿರ್ಮಾಣಕ್ಕಾಗಿ ಭೂ ಸ್ವಾಧೀನಗೊಳಿಸಿ ನಿರ್ಮಾಣ ಕಾರ್ಯಕ್ಕಾಗಿ ಹಸ್ತಾಂತರಿಸಬೇಕು. ಇದಕ್ಕಾಗಿ ಕಾನೂನು ರಚಿಸಬೇಕು'' ಎಂದು ಆರೆಸ್ಸೆಸ್ ಸಹಕಾರ್ಯವಾಹ ಮನಮೋಹನ್ ವೈದ್ಯ ಹೇಳಿದರು.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕಿಂತ ಮೊದಲು ಆ ಸ್ಥಳದಲ್ಲಿ ರಾಮ ಮಂದಿರವಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಲ್ಲಿ ತಾನು ಹಿಂದು ಸಮುದಾಯದ ಜತೆಗೆ ನಿಲ್ಲುವುದಾಗಿ 1994ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಸುಪ್ರೀಂ ಕೋರ್ಟಿನ ಮುಂದೆ ಹೇಳಿರುವುದರಿಂದ ಈ  ಆಶ್ವಾಸನೆಯನ್ನು ಈಡೇರಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಆರೆಸ್ಸೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News