ಖಿನ್ನತೆ ನಿವಾರಕಗಳ ಕುರಿತು ಈ ಮಾಹಿತಿಗಳು ನಿಮಗೆ ತಿಳಿದಿರಬೇಕು

Update: 2018-11-02 10:31 GMT

ವಿಶ್ವ ಆರೋಗ್ಯ ಸಂಸ್ಥೆಯ 2017ರ ಅಂಕಿಅಂಶಗಳಂತೆ 2015ರಲ್ಲಿ 322 ಮಿಲಿಯ ಜನರು ಖಿನ್ನತೆಯಿಂದ ಬಳಲುತ್ತಿದ್ದರು. ಭಾರತದಲ್ಲಿಯೇ ಸುಮಾರು 57 ಮಿ.ಜನರು ಖಿನ್ನತೆಯಿಂದ ನರಳುತ್ತಿದ್ದಾರೆ. ಖಿನ್ನತೆ ಒಂದು ಮಾನಸಿಕ ಸ್ಥಿತಿಯಾಗಿದ್ದು, ಎಲ್ಲ ವಯೋಮಾನದ ಜನರನ್ನು ಬಾಧಿಸುತ್ತದೆ.

ಖಿನ್ನತೆಯು ಗಂಭೀರ ಸ್ವರೂಪದ್ದಾಗಿದ್ದರೆ ಮನೋಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಜೊತೆಗೆ ಖಿನ್ನತೆ ನಿವಾರಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಖಿನ್ನತೆಯ ತೀವ್ರ ಲಕ್ಷಣಗಳನ್ನು ಹೊಂದಿರುವ ಮತ್ತು ಮನೋಚಿಕಿತ್ಸೆ ಹಾಗೂ ಕೌನ್ಸೆಲಿಂಗ್‌ಗೆ ಸ್ಪಂದಿಸದ ರೋಗಿಗಳಿಗೆ ಖಿನ್ನತೆ ನಿವಾರಕಗಳನ್ನು ನೀಡಲಾಗುತ್ತದೆ. ಖಿನ್ನತೆ ಹೊಂದಿರುವವರು ಮತ್ತು ವೈದ್ಯರು ಶಿಫಾರಸು ಮಾಡಿರುವ ಖಿನ್ನತೆ ನಿವಾರಕಗಳನ್ನು ಸೇವಿಸುತ್ತಿರುವವರು ಅವುಗಳ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಮತ್ತು ಆತಂಕವನ್ನು ಹೊಂದಿರುತ್ತಾರೆ. ಖಿನ್ನತೆ ನಿವಾರಕಗಳ ಕುರಿತು ಕೆಲವು ಮಿಥ್ಯೆಗಳು ಹಾಗೂ ತಪ್ಪುಗ್ರಹಿಕೆಗಳು ಮತ್ತು ಅವುಗಳಿಗೆ ಉತ್ತರಗಳು ಇಲ್ಲಿವೆ.

► ಖಿನ್ನತೆ ನಿವಾರಕಗಳು ಚಟವನ್ನುಂಟು ಮಾಡುತ್ತವೆ

ಇಲ್ಲ,ಖಿನ್ನತೆ ನಿವಾರಕಗಳು ಮದ್ಯ ಅಥವಾ ತಂಬಾಕಿನಂತೆ ಚಟಕ್ಕೆ ಕಾರಣವಾಗುವುದಿಲ್ಲ ಮತ್ತು ಪದೇ ಪದೇ ಅವುಗಳನ್ನು ಸೇವಿಸಬೇಕೆಂಬ ತುಡಿತವನ್ನುಂಟು ಮಾಡುವುದಿಲ್ಲ. ಅಲ್ಲದೆ ಅವು ಸಹಿಷ್ಣುತೆಯನ್ನು ಉಂಟು ಮಾಡುವುದಿಲ್ಲ,ಅಂದರೆ ಖಿನ್ನತೆ ನಿವಾರಕಗಳನ್ನು ದೀರ್ಘ ಕಾಲದಿಂದ ಸೇವಿಸುತ್ತಿದ್ದರೆ ಪರಿಣಾಮಕಾರಿಯಾಗಿರಲು ನೀವು ಹೆಚ್ಚಿನ ಡೋಸ್ ಸೇವಿಸುವುದು ಅಗತ್ಯವಾಗುವುದಿಲ್ಲ. ಆದರೆ ಖಿನ್ನತೆ ನಿವಾರಕಗಳ ಸೇವನೆಯನ್ನು ಏಕಾಏಕಿ ನಿಲ್ಲಿಸುವುದರಿಂದ ವಾಕರಿಕೆಯಂತಹ ಲಕ್ಷಣಗಳು ಕಂಡುಬರಬಹುದು. ಹೀಗಾಗಿ ಖಿನ್ನತೆ ನಿವಾರಕಗಳ ಸೇವನೆಯನ್ನು ನಿಲ್ಲಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

► ಖಿನ್ನತೆ ನಿವಾರಕಗಳು ‘ಆನಂದದ’ ಮಾತ್ರ್ರೆಗಳಾಗಿವೆ

ಇದೊಂದು ಸಂಪೂರ್ಣ ತಪ್ಪುಗ್ರಹಿಕೆಯಾಗಿದೆ, ಖಿನ್ನತೆ ನಿವಾರಕಗಳು ನಶೆ ಅಥವಾ ಉನ್ಮಾದವನ್ನುಂಟು ಮಾಡುವುದಿಲ್ಲ. ಅವು ಮಿದುಳಿನಲ್ಲಿಯ ರಾಸಾಯನಿಕ ಅಸಮತೋಲನಗಳನ್ನು ಸರಿಪಡಿಸುವ ಮತ್ತು ಖಿನ್ನತೆಗೊಳಗಾಗಿರುವ ವ್ಯಕ್ತಿಯಲ್ಲಿ ಮನೆಮಾಡಿರುವ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಲು ನೆರವಾಗುವ ಔಷಧಿಗಳಾಗಿವೆ. ಅವು ವ್ಯಕ್ತಿಗೆ ಆರಾಮವನ್ನು ನೀಡುವ ಜೊತೆಗೆ ದಿನವಿಡೀ ಆತನಲ್ಲಿ ಸಹಜ ಭಾವನೆಗಳನ್ನುಂಟು ಮಾಡುತ್ತವೆ.

► ಒಮ್ಮೆ ಖಿನ್ನತೆ ನಿವಾರಕಗಳನ್ನು ಸೇವಿಸತೊಡಗಿದರೆ ಜೀವಮಾನವಿಡೀ ಬಿಡುವಂತಿಲ್ಲ

 ಇದು ನಿಜವಲ್ಲ. ಸಾಮಾನ್ಯ ನಿಯಮವಾಗಿ ಖಿನ್ನತೆಯು ಮರುಕಳಿಸದಿರಲು ನಿವಾರಕಗಳನ್ನು ಒಂದೆರಡು ವರ್ಷ ಅಥವಾ ಸ್ವಲ್ಪ ಹೆಚ್ಚುಕಾಲ ಸೇವಿಸಿದರೆ ಸಾಕು. ಅಲ್ಲದೆ ಖಿನ್ನತೆಯ ಲಕ್ಷಣಗಳು ನಿವಾರಣೆಯಾದ ಬಳಿಕ ಸುಮಾರು ಆರು ತಿಂಗಳವರೆಗೆ ಅಥವಾ ವೈದ್ಯರು ಸೂಚಿಸಿದಷ್ಟು ಅವಧಿಗೆ ಅವುಗಳನ್ನು ಸೇವಿಸಬೇಕಾಗುತ್ತದೆ. ಈ ಅವಧಿಯ ಬಳಿಕ ವೈದ್ಯರು ಡೋಸ್‌ಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತ ಅಂತಿಮವಾಗಿ ಸೇವನೆಯನ್ನು ನಿಲ್ಲಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ,ವಿಶೇಷವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸಲ ತೀವ್ರ ಖಿನ್ನತೆ ಮರುಕಳಿಸಿದ ವ್ಯಕ್ತಿಗಳಿಗೆ ದೀರ್ಘಕಾಲ ಖಿನ್ನತೆ ನಿವಾರಕಗಳ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.

► ಖಿನ್ನತೆ ನಿವಾರಕಗಳು ಶೀಘ್ರ ಉಪಶಮನ ನೀಡುತ್ತವೆ

ಸುಮಾರು ನಾಲ್ಕರಿಂದ ಆರು ವಾರಗಳ ಕಾಲ ಖಿನ್ನತೆ ನಿವಾರಕಗಳ ಪರಿಣಾಮಕಾರಿ ಡೋಸ್‌ಗಳ ಸೇವನೆಯ ಬಳಿಕವಷ್ಟೇ ಸುಧಾರಣೆಯ ಚಿಹ್ನೆಗಳು ಕಾಣಿಸತೊಡಗುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಅದಕ್ಕೂ ಮುನ್ನವೇ ಈ ಔಷಧಿಗಳ ಅಡ್ಡ ಪರಿಣಾಮಗಳು ಅನುಭವಕ್ಕೆ ಬರಬಹುದು. ಆದ್ದರಿಂದ ಔಷಧಿಗಳನ್ನು ಬದಲಿಸುವ ಯೋಚನೆಯನ್ನು ಮಾಡುವುದಕ್ಕೆ ಮುನ್ನ ಕನಿಷ್ಠ ಆರು ವಾರಗಳ ಕಾಲವಾದರೂ ಅವುಗಳಿಗೆ ಅಂಟಿಕೊಂಡಿರಬೇಕು.

► ಖಿನ್ನತೆ ನಿವಾರಕಗಳು ಇನ್ನಷ್ಟು ಖಿನ್ನತೆಯನ್ನುಂಟು ಮಾಡುತ್ತವೆ

 ಇದು ಹೆಚ್ಚಿನ ಪ್ರಕರಣಗಳಲ್ಲಿ ವೈದ್ಯಕೀಯವಾಗಿ ಖಿನ್ನತೆಯನ್ನು ಹೊಂದಿರದಿದ್ದರೂ ಮೇಲ್ನೋಟಕ್ಕೆ ಅಂತಹ ಲಕ್ಷಣಗಳನ್ನು ಹೊಂದಿರುವ ಮತ್ತು ತಪ್ಪಾಗಿ ಖಿನ್ನತೆ ನಿವಾರಕಗಳ ಸೇವನೆಯನ್ನು ಶಿಫಾರಸು ಮಾಡಲ್ಪಟ್ಟಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಗೆ ಬೇರೆ ಔಷಧಿಯನ್ನು ನೀಡಬೇಕಾಗುತ್ತದೆ. ಹೀಗಾಗಿ ನಿಮ್ಮ ಸ್ಥಿತಿಯನ್ನು ನಿಖರವಾಗಿ ನಿರ್ಧರಿಸುವ ಮತ್ತು ನಿಮಗೆ ಸರಿಯಾದ ವಿಧದ ಖಿನ್ನತೆ ನಿವಾರಕಗಳನ್ನು ನೀಡುವ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

► ಸುಧಾರಣೆಯಾಗಿದೆ ಎಂದು ಅನ್ನಿಸತೊಡಗಿದರೆ ಖಿನ್ನತೆ ನಿವಾರಕಗಳ ಸೇವೆನೆಯನ್ನು ನಿಲ್ಲಿಸಬಹುದು

ಹೇಗೆ ಆ್ಯಂಟಿಬಯೊಟಿಕ್‌ಗಳ ಕೋರ್ಸ್ ಪೂರ್ಣಗೊಳಿಸದೆ ಅವುಗಳ ಸೇವನೆಯನ್ನು ನಿಲ್ಲಿಸುವಂತಿಲ್ಲವೋ ಹಾಗೆಯೇ ನೀವು ಚೇತರಿಸಿಕೊಂಡಿದ್ದೀರಿ ಎಂದು ನಿಮಗನ್ನಿಸಿದರೂ ಖಿನ್ನತೆ ನಿವಾರಕಗಳ ಸೇವನೆಯನ್ನು ನಿಲ್ಲಿಸಕೂಡದು. ಖಿನ್ನತೆಯ ಮರುಕಳಿಕೆಯನ್ನು ತಡೆಯಲು ವೈದ್ಯರು ಸೂಚಿಸಿದಷ್ಟು ಅವಧಿಗೆ ಅವುಗಳ ಸೇವನೆಯನ್ನು ಮುಂದುವರಿಸಬೇಕಾಗುತ್ತದೆ. ಅವುಗಳ ಸೇವನೆಯನ್ನು ಹೇಗೆ ನಿಲ್ಲಿಸಬೇಕು ಎಂದು ನಿಮ್ಮ ವೈದ್ಯರೇ ಸೂಚಿಸುತ್ತಾರೆ.

► ಕುಟುಂಬಿಕರು ಅಥವಾ ಸ್ನೇಹಿತರಿಗೆ ಪರಿಣಾಮಕಾರಿಯಾದ ಖಿನ್ನತೆ ನಿವಾರಕಗಳನ್ನು ನಾವೂ ಸೇವಿಸಬಹುದೇ?

 ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಇತರರಿಗಿಂತ ಭಿನ್ನವಾಗಿರುತ್ತಾನೆ. ಪ್ರತಿಯೊಂದೂ ಮಿದುಳು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಇತರರಿಗೆ ಪರಿಣಾಮಕಾರಿಯಾದ ಔಷಧಿ ನಮಗೆ ಸೂಕ್ತವಾಗದಿರಬಹುದು. ಏಕೆಂದರೆ ಔಷಧಿಗಳು ವಿಭಿನ್ನವಾಗಿ ಕಾರ್ಯ ನಿರ್ವಹಿಸಬಹುದಾದ ರಾಸಾಯನಿಕ ಸಂದೇಶವಾಹಕವನ್ನು ಗುರಿಯಾಗಿಸಿಕೊಳ್ಳುತ್ತವೆ. ಹೀಗಾಗಿ ವೈದ್ಯರು ಖಿನ್ನತೆಗೊಳಗಾದ ವ್ಯಕ್ತಿಗೆ ಔಷಧಿಗಳನ್ನು ಶಿಫಾರಸು ಮಾಡುವ ಮುನ್ನ ಆತನ ಮಾನಸಿಕ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ತಪಾಸಣೆಗಳನ್ನು ನಡೆಸುವುದು ಮುಖ್ಯವಾಗುತ್ತದೆ.

► ಖಿನ್ನತೆ ನಿವಾರಕಗಳು ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿವೆ

 ಇತರ ಯಾವುದೇ ಔಷಧಿಗಳಂತೆ ಖಿನ್ನತೆ ನಿವಾರಕಗಳೂ ವಾಕರಿಕೆ,ಬಳಲಿಕೆ, ತಲೆನೋವು ಮತ್ತು ಬಾಯಿಯ ಶುಷ್ಕತೆಯಿಂದ ಹಿಡಿದು ಕುಂದಿದ ಲೈಂಗಿಕ ಬಯಕೆಯವರೆಗೆ ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಖಿನ್ನತೆ ನಿವಾರಕಗಳನ್ನು ಸೇವಿಸುವವರಲ್ಲಿ ಅರ್ಧಕ್ಕೂ ಹೆಚ್ಚಿನ ಜನರು ಅಡ್ಡಪರಿಣಾಮಗಳ ಬಗ್ಗೆ ದೂರಿಕೊಳ್ಳುತ್ತಾರೆ. ಆದರೆ ಆರಂಭಿಕ ವಾರಗಳ ಬಳಿಕ ಈ ಅಡ್ಡಪರಿಣಾಮಗಳು ಕಡಿಮೆಯಾಗುತ್ತ ಹೋಗುತ್ತವೆ. ಆದರೆ ತಲೆ ಸುತ್ತುವಿಕೆ, ನಿದ್ರಾಹೀನತೆ, ವಾಕರಿಕೆ, ಶುಷ್ಕ ಬಾಯಿ,ಮಲಬದ್ಧತೆ,ಮಸುಕಾದ ದೃಷ್ಟಿಯಂತಹ ಗಂಭೀರ ಅಡ್ಡ ಪರಿಣಾಮಗಳು ಮುಂದುವರಿದರೆ ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಹೆಚ್ಚಿದ ಎದೆಬಡಿತ,ಹೃದಯಾತಿಸ್ಪಂದನ,ಚರ್ಮ ಹಳದಿ ಬಣ್ಣಕ್ಕೆ ತಿರುಗುವಿಕೆ ಮತ್ತು ಚರ್ಮದಲ್ಲಿ ತುರಿಕೆಯಂತಹ ಲಕ್ಷಣಗಳು ಹೃದಯ ಅಥವಾ ಯಕೃತ್ತಿಗೆ ಹಾನಿಯನ್ನು ಸೂಚಿಸಬಹುದು ಮತ್ತು ಇವು ನೀವು ವೈದ್ಯರನ್ನು ತಕ್ಷಣ ಕಾಣಬೇಕು ಎನ್ನುವ ಎಚ್ಚರಿಕೆಯ ಸಂಕೇತಗಳಾಗಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News