ಆ್ಯಸಿಡ್ ದಾಳಿ ಸಂತ್ರಸ್ತರ ಜೊತೆ ತಾರತಮ್ಯ: ಎಐಐಎಂಎಸ್ ನೇಮಕಕ್ಕೆ ತಡೆ ನೀಡಿದ ನ್ಯಾಯಾಲಯ

Update: 2018-11-03 16:30 GMT

ಹೊಸದಿಲ್ಲಿ,ನ.3: ಆ್ಯಸಿಡ್ ದಾಳಿ ಸಂತ್ರಸ್ತರ ಜೊತೆ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಲ್ಲಿ ನಡೆಯುತ್ತಿದ್ದ ನರ್ಸಿಂಗ್ ಅಧಿಕಾರಿಗಳ ನೇಮಕ ಪ್ರಕ್ರಿಯೆಗೆ ದಿಲ್ಲಿ ಉಚ್ಚ ನ್ಯಾಯಾಲಯ ತಡೆ ವಿಧಿಸಿದೆ.

ಭೋಪಾಲ್, ಜೋಧ್‌ಪುರ,ಪಾಟ್ನಾ ಮತ್ತು ರಾಯ್‌ಪುರದಲ್ಲಿರುವ ತನ್ನ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು 2000 ನರ್ಸಿಂಗ್ ಅಧಿಕಾರಿಗಳ ಅಗತ್ಯವಿರುವುದಾಗಿ ಎಐಐಎಂಎಸ್ ಸೆಪ್ಟಂಬರ್‌ನಲ್ಲಿ ಜಾಹೀರಾತು ನೀಡಿತ್ತು. ಅಂಗವೈಕಲ್ಯ ಹೊಂದಿರುವ ವ್ಯಕ್ತಿ (ಪಿಡಬ್ಲೂಡಿ) ಕೋಟಾದಡಿ ಕೇವಲ ಒಂದು ಕಾಲು ಊನ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿತ್ತು.

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಮೀಸಲಾತಿ ಲಾಭವನ್ನು ನೀಡದ ಈ ನೇಮಕ ಪ್ರಕ್ರಿಯೆಯ ವಿರುದ್ಧ ಆ್ಯಸಿಡ್ ದಾಳಿ ಸಂತ್ರಸ್ತೆ ವೃತ್ತಿಪರ ನರ್ಸ್ ಆಗಿರುವ ಯಾಸ್ಮೀನ್ ಮನುಶ್ರೀ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಸುರಶ್ ಕೈಟ್ ಅವರ ಏಕಸದಸ್ಯ ಪೀಠ, ಮುಂದಿನ ಆದೇಶದ ವರೆಗೆ ಎಐಐಎಂಎಸ್ ನೇಮಕ ಪ್ರಕ್ರಿಯೆಯನ್ನು ಮುಂದವರಿಸುವಂತಿಲ್ಲ ಎಂದು ತಿಳಿಸುತ್ತಾ ನೇಮಕ ಪ್ರಕ್ರಿಯೆಗೆ ತಡೆ ನೀಡಿದೆ. ಸದ್ಯ ಅರ್ಜಿಯ ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿ ಮಾಡಿರುವ ನ್ಯಾಯಾಲಯ, ಅರ್ಜಿದಾರರು ಎತ್ತಿರುವ ಪ್ರಶ್ನೆಗೆ ಕೇಂದ್ರ ಮತ್ತು ಎಐಐಎಂಎಸ್ ಉತ್ತರ ನೀಡುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News