ಗಿನ್ನೆಸ್ ದಾಖಲೆಯತ್ತ ಪಿಹೂ

Update: 2018-11-03 18:50 GMT

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಿನೋದ್ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರವೀಗ ಹೊಸ ದಾಖಲೆಯೊಂದನ್ನು ಬರೆದಿದೆ. ನವೆಂಬರ್ 16ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಟ್ರೇಲರ್ ವೀಕ್ಷಿಸಿದವರ ಸಂಖ್ಯೆಯು ಈಗಾಗಲೇ 50 ಲಕ್ಷ ದಾಟಿದೆ. ಈ ಚಿತ್ರದ ವೈಶಿಷ್ಟವೆಂದರೆ, ಇಡೀ ಚಿತ್ರದಲ್ಲಿ ಕೇವಲ ಒಂದೇ ಒಂದು ಪಾತ್ರವಿರುತ್ತದೆ. ಅಂದಹಾಗೆ ಆ ಪಾತ್ರವನ್ನು ಕೇವಲ ಎರಡು ವರ್ಷದ ಹೆಣ್ಣು ಮಗುವೊಂದು ನಿರ್ವಹಿಸಿದೆ.

ರೋನಿ ಸ್ಕ್ರೂವಾಲಾ ಹಾಗೂ ಸಿದ್ಧಾರ್ಥ ರಾಯ್ ಕಪೂರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೇವಲ ಎರಡು ವರ್ಷದ ಬಾಲನಟಿ ಮಾತ್ರ ನಟಿಸಿರುವ, ಇತರ ಯಾವುದೇ ಪಾತ್ರಗಳು ಇಲ್ಲದ ವಿಶ್ವದ ಮೊದಲ ಚಿತ್ರ ಇದಾಗಿದೆಯೆಂದು ಈ ಚಿತ್ರವನ್ನು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಅವರು ಗಿನ್ನೆಸ್ ಸಂಸ್ಥೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರಂತೆ.

ಇಷ್ಟಕ್ಕೂ ಪಿಹೂ ನಿರ್ಮಿಸುವಾಗ, ನಿರ್ದೇಶಕ ವಿನೋದ್ ಕಾಪ್ರಿ ಅವರಿಗೆ ಈ ಚಿತ್ರವನ್ನು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿಸಬಹುದೆಂಬ ಕುರಿತು ಯೋಚನೆ ಯೇ ಬಂದಿರಲಿಲ್ಲವಂತೆ. ಎರಡು ವರ್ಷದ ಬಾಲಕಿಯೊಬ್ಬಳ ಮುಗ್ಧತೆಯನ್ನು ಈ ಚಿತ್ರವು ಅತ್ಯಂತ ಮಾರ್ಮಿಕವಾಗಿ ಸೆರೆಹಿಡಿದಿದೆಯಂತೆ. ಈಗಾಗಲೇ ಪಿಹೂ ಚಿತ್ರವು ವ್ಯಾಂಕೂವರ್, ಪಾಮ್‌ಸ್ಪ್ರಿಂಗ್ಸ್, ಮೊರಾಕ್ಕೊ ಹಾಗೂ ಜರ್ಮನಿಯಲ್ಲಿ ನಡೆದ ಪ್ರತಿಷ್ಠಿತ ಅಂರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರೇಕ್ಷಕರು, ವಿಮರ್ಶಕರ ಮುಕ್ತಕಂಠದ ಪ್ರಶಂಸೆ ಪಡೆದಿದೆ.

ಮೊರಾಕ್ಕೊ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಿಹೂಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಗೆದ್ದಿದೆ. ದೇವ್‌ಡಿ, ಎ ವೆಡ್‌ನೆಸ್‌ಡೆ, ರಂಗ್‌ದೆ ಬಸಂತಿ ಹಾಗೂ ಬರ್ಫಿಯಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿರುವ ರಾನಿ ಸ್ಕ್ರೂವಾಲಾ ಹಾಗೂ ಸಿದ್ಧಾರ್ಥ ರಾಯ್ ಕಪೂರ್, ಇದೀಗ ‘ಪಿಹೂ’ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದ್ದಾರೆಂಬ ನಿರೀಕ್ಷೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News