ಚೀನಾ-ಭಾರತ ಏಕತೆಗಾಗಿ ಪಟೇಲ್ ಪ್ರತಿಮೆ!

Update: 2018-11-04 04:05 GMT

ರೂಪಾಯಿ ಬೆಲೆ ಇಳಿದುದಕ್ಕೆ ಸೇಡು ತೀರಿಸಿಕೊಳ್ಳುವಂತೆ ವಿಶ್ವದಲ್ಲೇ ಅತಿ ದೊಡ್ಡ ಸರ್ದಾರ್ ಪಟೇಲ್ ಪ್ರತಿಮೆಯನ್ನು ಅನಾವರಣಗೊಳಿಸಿದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಸುರಿಮಳೆಯೇ ಹರಿಯಿತು. ಸುಮಾರು 3 ಸಾವಿರ ಕೋಟಿ ರೂಪಾಯಿಯನ್ನು ಈ ಪ್ರತಿಮೆಗೆ ವೆಚ್ಚ ಮಾಡಿರುವುದರಿಂದಾಗಿ ಆ ಪ್ರತಿಮೆಯಿಂದ ದೇಶಕ್ಕೆ ಭಾರೀ ಲಾಭವಿದೆ ಎಂದು ಮಾಧ್ಯಮಗಳು ಊಹಿಸಿ ಬರೆಯತೊಡಗಿದವು. ನೋಟು ನಿಷೇಧದ ಸಂದರ್ಭದಲ್ಲಿ ಅದರಿಂದ ದೇಶಕ್ಕಾಗುವ ಲಾಭಗಳನ್ನು ಹಗಲು ರಾತ್ರಿ ಚಾನೆಲ್‌ಗಳಲ್ಲಿ ಚೀರಾಡಿದವರು ಇದೀಗ ಪ್ರತಿಮೆಯಿಂದ ಈ ದೇಶ ಹೇಗೆ ವಿಶ್ವದ ಶ್ರೀಮಂತ ದೇಶಗಳ ಸಾಲಿನಲ್ಲಿ ನಿಲ್ಲುತ್ತವೆ ಎನ್ನುವುದನ್ನು ಸಂಶೋಧನೆ ಮಾಡಿ ವಿವರಿಸತೊಡಗಿದರು. ಪತ್ರಕರ್ತ ಎಂಜಲು ಕಾಸಿ ಅವನ್ನೆಲ್ಲ ಸಂಗ್ರಹಿಸಿ ಇಲ್ಲಿ ನೀಡಿದ್ದಾನೆ.

ಪಬ್ಲಿಕ್ ರಂಗಪ್ಪ:

 ನರೇಂದ್ರ ಮೋದಿಯವರು ಈ ಪಟೇಲ್ ಪ್ರತಿಮೆಯನ್ನು ನಿಲ್ಲಿಸಿರುವುದರ ಹಿಂದೆ ಭಾರೀ ತಂತ್ರಗಾರಿಕೆಯಿದೆ. ಮುಖ್ಯವಾಗಿ ಅಷ್ಟೆತ್ತರ ಪ್ರತಿಮೆ ಇಡೀ ದೇಶದ ಕಪ್ಪು ಹಣದ ಬಗ್ಗೆ ಕಣ್ಗಾವಲು ಇಡುತ್ತದೆ. ಹಿಂದೆ ಎರಡು ಸಾವಿರ ರೂಪಾಯಿ ನೋಟಿನಲ್ಲಿ ನರೇಂದ್ರ ಮೋದಿಯವರು ಚಿಪ್ಪನ್ನು ಇಟ್ಟಂತೆಯೇ ಇದೀಗ ಪಟೇಲ್‌ರ ಎರಡು ಕಣ್ಣುಗಳಲ್ಲಿ ಎರಡು ಕಂಪ್ಯೂಟರ್ ಚಿಪ್ಪುಗಳನ್ನು ಇಟ್ಟಿದ್ದಾರೆ. ಅದು ಭೂಮಿಯ 182 ಮೀಟರ್ ಅಡಿಯಲ್ಲಿ ಕಪ್ಪು ಹಣವನ್ನು ಬಚ್ಚಿಟ್ಟರೂ ಪತ್ತೆ ಹಚ್ಚುತ್ತದೆ. ಹಾಗೆಯೇ ದೇಶದ ಯಾವುದೇ ಮೂಲೆಯಲ್ಲಿ ಕಪ್ಪು ಹಣ ಕಂಡು ಬಂದರೆ ತಕ್ಷಣ ಅದು ಮೋದಿಯವರಿಗೆ ಸಂದೇಶವನ್ನು ರವಾನಿಸುತ್ತದೆ. ನೋಟು ನಿಷೇಧದಿಂದ ಕಪ್ಪು ಹಣ ಬರಲಿಲ್ಲವಾದುದರಿಂದ, ಈ ತಂತ್ರವನ್ನು ಪ್ರಯೋಗಿಸಿ ಅವರು ಕಪ್ಪು ಹಣವನ್ನು ಪತ್ತೆ ಹಚ್ಚಲು ಹೊರಟಿದ್ದಾರೆ. ವಿಶ್ವದಲ್ಲೇ ಕಪ್ಪು ಹಣ ಪತ್ತೆ ಹಚ್ಚಲು ಪ್ರತಿಮೆಯನ್ನು ಬಳಸಿರುವುದು ಭಾರತದೇಶ ಮಾತ್ರ. ಪಟೇಲರ ಹೆಸರಿನ ಪ್ರತಿಮೆಯನ್ನೇ ಇದಕ್ಕೆ ಬಳಸಿರುವುದರಿಂದ, ಪಟೇಲರ ಖ್ಯಾತಿಯೂ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಏರುತ್ತದೆ.

ಕುಖ್ಯಾತ ಅರ್ಥಶಾಸ್ತ್ರಜ್ಞ ಗುರುಮೂರ್ತಿ:

ಅರ್ಥವ್ಯವಸ್ಥೆಯಲ್ಲಿ ನಡೆದ ಅತ್ಯಂತ ದೊಡ್ಡ ಕ್ರಾಂತಿಯಾಗಿದೆ ಪಟೇಲರ ಪ್ರತಿಮೆ. ರೂಪಾಯಿ ಬೆಲೆ ಕುಸಿಯುತ್ತಿದೆ ಎಂದು ವ್ಯಂಗ್ಯ ಮಾಡುತ್ತಿರುವವರು ಇದರಿಂದ ಉಭಯ ಸಂಕಟಕ್ಕೀಡಾಗಿದ್ದಾರೆ. ರೂಪಾಯಿ ಬೆಲೆ ಕುಸಿದರೆ ಏನಾಯಿತು, ನಮ್ಮ ಪ್ರತಿಮೆಯಿಂದಾಗಿ ಲಿಬರ್ಟಿ ಪ್ರತಿಮೆಯ ಎತ್ತರ ಕುಸಿಯಿತು. ಇನ್ನು ಪಟೇಲರನ್ನು ನೋಡಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇದರಿಂದಾಗಿ ದೇಶದ ಆರ್ಥಿಕತೆ ಹೆಚ್ಚಾಗಿ ರೂಪಾಯಿಯ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಪಟೇಲರ ಪ್ರತಿಮೆ ಅತಿ ಎತ್ತರದಲ್ಲಿ ಇರುವುದರಿಂದಾಗಿ ಮೋಡಗಳು ಪಾಕಿಸ್ತಾನದ ಕಡೆಗೆ ಸಾಗದಂತೆ ಪ್ರತಿಮೆ ತಡೆಯುತ್ತದೆ. ಇದರಿಂದಾಗಿ ಭಾರತದಲ್ಲಿ ಹೆಚ್ಚು ಮಳೆಯಾಗಿ ರೈತರು ಹೆಚ್ಚು ಹೆಚ್ಚು ಬೆಳೆ ತೆಗೆಯುವುದಕ್ಕೆ ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ತಾನದಲ್ಲಿ ಮಳೆ ಸುರಿಯದೇ ಅಲ್ಲಿ ಬರಗಾಲ ಏರ್ಪಡುತ್ತದೆ. ದೇಶಾದ್ಯಂತ ಉದ್ದಿಮೆಗಳು ಕುಸಿಯುತ್ತಿವೆ ಎಂಬ ಆರೋಪಗಳಿಗೆ ಈ ಪಟೇಲ್ ಪ್ರತಿಮೆ ಉತ್ತರವಾಗಿದೆ. ಪ್ರವಾಸಿಗರು ಈ ಪಟೇಲ್ ಪ್ರತಿಮೆಯನ್ನು ನೋಡಲು ಬರುವುದರಿಂದ, ಇಲ್ಲಿ ಚಹಾದ ಅಂಗಡಿಗಳು ಹೆಚ್ಚುತ್ತವೆ. ಅವೆಲ್ಲವೂ ಡಿಜಿಟಲ್ ಬ್ಯಾಂಕಿಂಗ್ ಮೂಲಕ ವ್ಯವಹಾರ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿ ದಿನ ಒಂದು ಲಕ್ಷ ಚಹಾ ಮಾರಾಟವಾಗುವ ಬಗ್ಗೆ ಈಗಾಗಲೇ ಚೀನಾದ ಶಿಲ್ಪಿಗಳು ಭರವಸೆ ನೀಡಿದ್ದಾರೆ. ಇದರಿಂದ ಚಹಾ ಕಂಪೆನಿಗಳು ಉದ್ಧಾರವಾಗುತ್ತದೆ. ಮೋದಿ ಬ್ರಾಂಡಡ್ ಚಹಾಪುಡಿಗಳನ್ನು ತಯಾರಿಸಿ ಮೋದಿ ಹೆಸರಲ್ಲೇ ಚಹಾ ಮಾರಲು ಸರಕಾರ ಮೋದಿ ಕ್ಯಾಂಟೀನ್‌ನ್ನು ಶುರು ಮಾಡುತ್ತದೆ. ಈ ಮೂಲಕ ದೇಶದಲ್ಲಿ ಶೀಘ್ರದಲ್ಲೇ ರೂಪಾಯಿಯ ಬೆಲೆ ಡಾಲರ್‌ಗಿಂತ ಜಾಸ್ತಿಯಾಗಲಿದೆ. ಒಂದು ವೇಳೆ ಜಾಸ್ತಿಯಾಗದೇ ಇದ್ದರೂ, ಡಾಲರ್ ಮುಂದೆ ರೂಪಾಯಿಯ ಬೆಲೆ ಹೆಚ್ಚಿಸಲು ರೂಪಾಯಿಯ ಭವ್ಯ ಪ್ರತಿಮೆಯನ್ನು ಮೋದಿಯವರು ನಿರ್ಮಿಸಲಿದ್ದಾರೆ. ಇದು ವಿಶ್ವದಲ್ಲೇ ಅತಿದೊಡ್ಡ ಪ್ರತಿಮೆಯಾಗಲಿದ್ದು ಪಟೇಲ್ ಪ್ರತಿಮೆಗೆ ಸುರಿದ ದುಪ್ಪಟ್ಟು ಹಣ ಸುರಿದು, ಜಗತ್ತಿನಲ್ಲೇ ರೂಪಾಯಿಯ ಎತ್ತರವನ್ನು ಏರಿಸಲಿದ್ದಾರೆ.

ರಕ್ಷಣಾ ಸಚಿವರು:

ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತವಾಗಿರುವ ಪಟೇಲ್ ಅವರಿಗೇ ಇದೀಗ ಪಾಕಿಸ್ತಾನ ಮತ್ತು ಚೀನಾದ ಗಡಿ ಕಾಯುವ ಕೆಲಸವನ್ನು ನೀಡಲಾಗಿದೆ. ಮುಖ್ಯವಾಗಿ ಈ ಪ್ರತಿಮೆ ದೇಶದ ಗಡಿಭಾಗದಲ್ಲಿ ನುಸುಳುಕೋರರನ್ನು ಗುರುತಿಸುವ ಕೆಲಸ ಮಾಡುತ್ತದೆ. ಪ್ರತಿಮೆ ಅತಿ ಎತ್ತರದಲ್ಲಿರುವುದರಿಂದ ಬೆಟ್ಟ, ಕಣಿವೆಗಳಲ್ಲಿ ನಡೆಯುವ ಚಲನವಲನಗಳನ್ನೂ ಅದು ನೋಡಬಹುದಾಗಿದೆ. ಅದಕ್ಕಾಗಿ ವಿಶೇಷವಾದ ಟೆಲಿಸ್ಕೋಪ್‌ಗಳ ವ್ಯವಸ್ಥೆಯನ್ನು ಒದಗಿಸಿಕೊಡಲಾಗಿದೆ. ಪಾಕಿಸ್ತಾನಿಯರು ಈ ಪ್ರತಿಮೆಯ ದೆಸೆಯಿಂದಾಗಿ ಉಗ್ರರನ್ನು ಕಳುಹಿಸುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ. ಚೀನಾದವರು ಗುಟ್ಟಾಗಿ ರಸ್ತೆ ನಿರ್ಮಿಸುವುದಕ್ಕೂ ಈ ಪ್ರತಿಮೆ ಅಡ್ಡಿಯಾಗಿದೆ. ಯಾವುದೇ ಶತ್ರುದಾಳಿಯ ಸಂಚುಗಳನ್ನು ಗುರುತಿಸಿ ಅವುಗಳ ಬಗ್ಗೆ ಮಾಹಿತಿಗಳನ್ನು ರಕ್ಷಣ ಇಲಾಖೆಗಳಿಗೆ ನೀಡಲಿವೆ.

ವಿದೇಶಾಂಗ ಸಚಿವರು:

ಇದರಿಂದಾಗಿ ಚೀನಾ ಮತ್ತು ಭಾರತದ ನಡುವೆ ಆತ್ಮೀಯ ಸಂಬಂಧಗಳು ಬೆಳೆಯುವಂತಾಗಿದೆ. ಈ ಪ್ರತಿಮೆಯಿಂದಾಗಿ ಚೀನಾದ ನೂರಾರು ಯುವಕರಿಗೆ ಕೆಲಸ ಸಿಕ್ಕಿದಂತಾಗಿದೆ. ಇದು ಚೀನಾಕ್ಕೆ ಭಾರತದ ಮೇಲೆ ಸ್ನೇಹವನ್ನು ಹೆಚ್ಚಿಸಿದೆ. ಸುಮಾರು 3000 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಪ್ರತಿಮೆ ಇದಾಗಿರುವುದರಿಂದ ಚೀನಾದ ಉದ್ಯಮಗಳು ಚೇತರಿಸಿಕೊಂಡಿವೆೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ತಲೆಯೆತ್ತಲಿರುವ ಎಲ್ಲ ಪ್ರತಿಮೆಗಳ ಉಸ್ತುವಾರಿಯನ್ನು ಚೀನಾಕ್ಕೆ ವಹಿಸಿ, ಅಲ್ಲಿನ ನಿರುದ್ಯೋಗಗಳನ್ನು ನಿವಾರಿಸುವ ಪಣವನ್ನು ಭಾರತ ತೊಟ್ಟಿದೆ. ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿದ್ದಾಗಿ ಗಡಿ ಭಾಗದಲ್ಲಿ ಚೀನಾದ ರಸ್ತೆ ಸುಗಮಗೊಳಿಸಲು ಸರ್ವ ರೀತಿಯ ಸಹಕಾರವನ್ನು ಭಾರತ ನೀಡಲಿದೆ. ಏಕತೆ ಪಟೇಲರ ಆದ್ಯತೆಯಾಗಿದೆ. ಆದುದರಿಂದಲೇ, ಚೀನಾ ಮತ್ತು ಭಾರತ ಮುಂದಿನ ದಿನಗಳಲ್ಲಿ ಒಂದಾಗಿ ಪಾಕಿಸ್ತಾನವನ್ನು ಎದುರಿಸಲಿದೆ. ಗೃಹ ಸಚಿವರು:

ಪಟೇಲರ ಪ್ರತಿಮೆ ಸ್ಥಾಪನೆಯ ಮೂಲಕ ನಕ್ಸಲೀಯರನ್ನು ಯಶಸ್ವಿಯಾಗಿ ದಮನಿಸಿದ್ದೇವೆ. ಪ್ರತಿಮೆ ನಿರ್ಮಾಣ ಆಸುಪಾಸಿನಲ್ಲಿರುವ 70 ಗ್ರಾಮಗಳಲ್ಲಿ ರೈತರ ವೇಷದಲ್ಲಿ ಬಚ್ಚಿಟ್ಟುಕೊಂಡಿರುವ ಎಲ್ಲ ನಕ್ಸರಿಗೂ ಸರಿಯಾದ ಪಾಠ ಕಲಿಸಿದ್ದೇವೆ. ಅವರ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಪ್ರತಿಮೆ ಸ್ಥಾಪನೆಗೆ ಬಳಸಿದ್ದೇವೆ. ಈ ಗ್ರಾಮಗಳಲ್ಲಿ ರೈತರ ವೇಷದಲ್ಲಿ ಬಚ್ಚಿಟ್ಟುಕೊಂಡು ಕೃಷಿಯ ಹೆಸರಲ್ಲಿ ಭೂಮಿಯನ್ನು ದುರ್ಬಳಕೆ ಮಾಡಿಕೊಂಡು ಬರುತ್ತಿದ್ದವರನ್ನೆಲ್ಲ ಓಡಿಸಿ ಅಲ್ಲಿ ಪ್ರವಾಸೋದ್ಯಮಗಳನ್ನು ಬೆಳೆಸಲು ಕ್ರಮ ತೆಗೆದುಕೊಂಡಿದ್ದೇವೆ. ಹಾಗೆಯೇ ಪ್ರತಿಮೆ ವಿರೋಧಿ ನೂರಾರು ನಕ್ಸಲರನ್ನು ಬಂಧಿಸಿ ಏಕತೆಗೆ ಎದುರಾದ ಅಡ್ಡಿಗಳನ್ನು ನಿವಾರಿಸಿದ್ದೇವೆ. ಚುನಾವಣಾ ಆಯೋಗ:

ಗುಜರಾತ್ ಚುನಾವಣೆಯಲ್ಲಿ ಪಟೇಲರ ಪ್ರತಿಮೆ ಮಹತ್ತರ ಪಾತ್ರವಹಿಸಲಿದೆ. ಮುಖ್ಯವಾಗಿ ಗುಜರಾತ್‌ನಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವ ಪಟೇಲ ಸಮುದಾಯದ ಜನರು ಚುನಾವಣಾ ಆಯೋಗದೊಂದಿಗೆ ಸಹಕರಿಸುವ ಸಾಧ್ಯತೆಗಳಿವೆ. ಇದು ಪ್ರತಿಮೆ ಈ ದೇಶದ ಪ್ರಜಾಸತ್ತೆಗೆ ಕೊಟ್ಟಿರುವ ದೊಡ್ಡ ಕೊಡುಗೆಯಾಗಿದೆ. ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ:

ಈ ಪ್ರತಿಮೆ ಅಂತಕ್ಕಂಥದ್ದು ಏನಿದೆಯೋ ಅದನ್ನು ನಾವು ಶ್ಲಾಘಿಸುತ್ತೇವೆ. ಯಾಕೆಂದರೆ, ಪ್ರತಿಮೆ ದೂರದಲ್ಲಿ ನೋಡಿದರೆ ನನ್ನ ಅಪ್ಪಾಜಿಯವರನ್ನು ಹೋಲುತ್ತದೆ. ಅಪ್ಪಾಜಿಗೂ ಪಟೇಲರಿಗೂ ಸಣ್ಣ ವ್ಯತ್ಯಾಸವಷ್ಟೇ ಇದೆ. ಅವರು ಉಕ್ಕಿನ ಮನುಷ್ಯರಾದರೆ, ಅಪ್ಪ ಮಣ್ಣಿನ ಮಗ. ಮುಖದಲ್ಲಿ ಸಾಕಷ್ಟು ಸಾಮ್ಯತೆಯಿದ್ದುದರಿಂದ ನನಗೆ ಸಂತೋಷವಾಗಿದೆ. ಮುಂದೆ ನಮ್ಮ ತೃತೀಯ ಶಕ್ತಿ ಅಧಿಕಾರಕ್ಕೆ ಬಂದರೆ ಆ ಪಟೇಲರ ಪ್ರತಿಮೆಯ ಹೆಸರನ್ನು ಬದಲಿಸಿ ಅದಕ್ಕೆ ಅಪ್ಪಾಜಿಯ ಹೆಸರನ್ನು ಇಟ್ಟು ಕರ್ನಾಟಕದ ಖ್ಯಾತಿಯನ್ನು ವಿಶ್ವದೆಲ್ಲೆಡೆ ಹರಡಲಿದ್ದೇನೆ.

*ಚೇಳಯ್ಯ

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News