25 ವರ್ಷದವರೆಗೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೆ: ಎ.ಆರ್. ರಹಮಾನ್

Update: 2018-11-04 16:28 GMT

ಮುಂಬೈ, ನ.4: ತನ್ನ ಬದುಕಿನ ಒಂದು ಘಟ್ಟದಲ್ಲಿ ನಿರಾಶೆ ಮತ್ತು ಹತಾಶೆಯಿಂದ ತಾನು ಪ್ರತೀ ದಿನ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಹೇಳಿದ್ದಾರೆ. “25ನೇ ವರ್ಷದವರೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ದಿನಾ ಮೂಡುತ್ತಿತ್ತು. ನನ್ನ ತಂದೆ ನಿಧನರಾದರು. ಆಗ ನನ್ನಲ್ಲಿ ಶೂನ್ಯತೆಯ ಭಾವ ಮೂಡಿತ್ತು. ಬಹಳಷ್ಟು ಘಟನೆಗಳು ನಡೆದುಹೋದವು” ಎಂದು ರಹಮಾನ್ ಹೇಳಿದ್ದಾರೆ. ಮುಂಬೈಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಹಮಾನ್ ಅವರ ಜೀವನಚರಿತ್ರೆಯ ಕೃತಿ ಬಿಡುಗಡೆಯಾಗಿದೆ.

ರಹಮಾನ್ ಮೂಲ ಹೆಸರು ದಿಲೀಪ್ ಕುಮಾರ್. ಅವರ ತಂದೆ ಆರ್.ಕೆ.ಶೇಖರ್ ಸಿನೆಮಾದ ಹಿನ್ನೆಲೆ ಗೀತೆಗಳ ರಚನೆಗಾರರಾಗಿದ್ದು ತಂದೆ ತೀರಿಹೋದ ಸಂದರ್ಭ ರಹಮಾನ್ 9 ವರ್ಷದ ಬಾಲಕ. ಶೇಖರ್ ಅವರ ಸಂಗೀತ ಸಾಧನಗಳನ್ನು ಬಾಡಿಗೆಗೆ ನೀಡಿ ಸಂಸಾರದ ಖರ್ಚು ನಿಭಾಯಿಸುತ್ತಿದ್ದರು. ಹೀಗಾಗಿ ಎಳೆಯ ಪ್ರಾಯದಲ್ಲೇ ರಹಮಾನ್ ಸಂಗೀತದತ್ತ ಆಕರ್ಷಿತರಾಗಿದ್ದರು. 12ರಿಂದ 22 ವರ್ಷದ ಮಧ್ಯೆ ನಾನು ಎಲ್ಲವನ್ನೂ ಮುಗಿಸಿಬಿಟ್ಟಿದ್ದು ಅದೇ ಕೆಲಸ ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ಜೀವನ ಬೇಸರ ಎನಿಸತೊಡಗಿತು. ಏನಾದರೊಂದು ಹೊಸತನ್ನು ಮಾಡಬೇಕೆನಿಸಿತು. “ನನ್ನ ಮೂಲ ಹೆಸರು ಕೂಡಾ ನನಗೆ ಇಷ್ಟವಾಗಲಿಲ್ಲ. ಅದನ್ನೂ ಬದಲಿಸಿದೆ. ಹೊಸ ಮನುಷ್ಯನಾಗಲು ನಾನು ಇಚ್ಛಿಸುತ್ತಿದ್ದೆ. ಸಂಪೂರ್ಣ ಬದಲಾಗಬೇಕಿತ್ತು. ಭೂತಕಾಲದ ಎಲ್ಲಾ ಲಗೇಜ್‌ಗಳನ್ನೂ ಗಂಟುಮೂಟೆ ಕಟ್ಟಿ ಬಿಸಾಡಲು ನಿರ್ಧರಿಸಿದ್ದೆ ಎಂದು ರಹಮಾನ್ ಹೇಳಿದ್ದಾರೆ. 25ನೇ ವರ್ಷದವರೆಗೆ ತನ್ನಲ್ಲಿ ಆತ್ಮಹತ್ಯೆಯ ಭಾವನೆ ಆಗಾಗ ಸುಳಿಯುತ್ತಿತ್ತು. ಸಾವು ಎಲ್ಲದಕ್ಕೂ ಶಾಶ್ವತ ಅಂತ್ಯವಾಗಿದೆ. ಹುಟ್ಟಿದವರೆಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದ್ದರಿಂದ ಯಾಕೆ ಹೆದರಬೇಕು. ಧೈರ್ಯವಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕು ಎಂದು ನಿರ್ಧರಿಸಿದೆ”.

“ನಾನು ಹೇಗೆ ಅಸ್ತಿತ್ವ ಉಳಿಸಿಕೊಳ್ಳುತ್ತೇನೆ ಎಂದು ಎಲ್ಲರೂ ಅಚ್ಚರಿಯಿಂದ ಗಮನಿಸುತ್ತಿದ್ದರು. ನಿನ್ನ ಬಳಿ ಎಲ್ಲವೂ ಇದೆ. ಅದನ್ನು ಬಾಚಿಕೊಳ್ಳು ಎಂದು ಕೆಲವರು ಸಲಹೆ ಮಾಡಿದರು. ಆದರೆ ನನಗದು ಇಷ್ಟವಿರಲಿಲ್ಲ. ಸಿಕ್ಕಿದ ಎಲ್ಲವನ್ನೂ ತಿಂದರೆ ಜಡ ಕಟ್ಟಿಹೋಗುತ್ತಾರೆ. ಆದ್ದರಿಂದ ಸ್ವಲ್ಪ ತಿಂದರೂ ಪರವಾಗಿಲ್ಲ, ಆದರೆ ಉದ್ದೇಶ ಸಫಲವಾಗಬೇಕು ಎಂಬುದು ನನ್ನ ನಿರ್ಧಾರವಾಗಿತ್ತು. ಚೆನ್ನೈಯಲ್ಲಿ ‘ಪಂಚತಾನ’ ಎಂಬ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿದ ಬಳಿಕ ತನ್ನ ಜೀವನದಲ್ಲಿ ಪ್ರಮುಖ ಬದಲಾವಣೆಯಾಯಿತು. ತಂದೆಯ ನಿಧನದ ಬಳಿಕ ನಾನು ಹೆಚ್ಚಿನ ಸಿನೆಮಗಳಲ್ಲಿ ಕೆಲಸ ಮಾಡಿರಲಿಲ್ಲ. 35 ಸಿನೆಮಗಳಲ್ಲಿ ನನಗೆ ಅವಕಾಶ ಸಿಕ್ಕರೂ ಕೇವಲ 2ರಲ್ಲಿ ಕೆಲಸ ಮಾಡಿದೆ. ನಮ್ಮೊಳಗಿನ ಸುವ್ಯಕ್ತ ಚೇತನವನ್ನು ಪ್ರಕಟಗೊಳಿಸಬೇಕು. ಹೀಗೆ ಮಾಡಬೇಕಿದ್ದರೆ ನಮ್ಮೊಳಗೆ ಆಳವಾಗಿ ಇಳಿದು ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳಬೇಕು. ನಿಮ್ಮ ಅಂತರಂಗದ ಧ್ವನಿಯನ್ನು ಅರಿತುಕೊಳ್ಳುವುದು ಕಷ್ಟವಾದರೂ ಒಮ್ಮೆ ಹೀಗೆ ಮಾಡಿದರೆ ನೀವು ಬಂಧಮುಕ್ತಗೊಂಡಂತಾಗುತ್ತದೆ ಹಾಗೂ ನಿಮ್ಮನ್ನು ನೀವೇ ಮರೆತು ಬಿಟ್ಟು ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಬಹುದು. ಈ ಕಾರಣದಿಂದಲೇ ತಾನು ತಡರಾತ್ರಿ ಅಥವಾ ಮುಂಜಾನೆಯ 5ರಿಂದ 6 ಗಂಟೆಯ ಅವಧಿಯಲ್ಲಿ ಕೆಲಸದಲ್ಲಿ ತೊಡಗುತ್ತೇನೆ”.

 “ನನ್ನ ಕೆಲಸದ ಕುರಿತಾದ ಆಳವಾದ ಚಿಂತನೆಯಲ್ಲಿದ್ದಾಗ ಯಾರೋ ಬಾಗಿಲನ್ನು ಬಡಿಯುತ್ತಾರೆ ಮತ್ತು ವಾಸ್ತವ ಪ್ರಪಂಚಕ್ಕೆ ಮರಳುತ್ತೇನೆ. ಆದರೆ ಆಳವಾದ ಚಿಂತನೆಯಿಂದ ಮತ್ತು ಅಂತರಂಗದ ಧ್ವನಿಗೆ ಕಿವಿಯಾಗುವುದರಿಂದ ತನ್ನ ಸಾಧನೆಗೆ ಸ್ಫೂರ್ತಿ ದೊರಕುತ್ತದೆ” ಎನ್ನುತ್ತಾರೆ. ವೃತ್ತಿಯಲ್ಲಿ ಆಗಿರಲಿ ಅಥವಾ ವೈಯಕ್ತಿಕ ಬದುಕಿನಲ್ಲಿ ಆಗಿರಲಿ, ಯಾವಾಗಲೂ ಬೇಸರದ ಭಾವನೆ ಮೂಡಬಾರದು ಮತ್ತು ನಿರಂತರವಾಗಿ ಹೊಸತನದ ಅನ್ವೇಷಣೆಗೆ ತನ್ನ ಬದುಕಿನಲ್ಲಿ ಪ್ರಮುಖ ಪಾತ್ರವಿದೆ ಎಂದು ರಹಮಾನ್ ಹೇಳಿದ್ದಾರೆ. ದಿನಾ ಅದೇ ಕೆಲಸ ಮಾಡಿ ನಿಮಗೆ ಬೇಸರವಾಗಬಹುದು. ಆಗ ಬೇರೆ ಕೆಲಸ ಮಾಡಬೇಕು. ಕೆಲಸದ ಮಧ್ಯೆ ಬೇಸರದ ಭಾವನೆ ಮೂಡಿದಾಗ ಪ್ರವಾಸ, ಕುಟುಂಬದ ಜೊತೆ ಹೆಚ್ಚಿನ ಸಮಸ್ಯೆ ಕಳೆಯುವುದರಿಂದ ತನ್ನಲ್ಲಿ ಏಕತಾನತೆಯ ಭಾವ ದೂರವಾಗಿ ಹೊಸ ಹುರುಪು ಮೂಡುತ್ತದೆ ಎಂದು ರಹಮಾನ್ ಹೇಳಿದ್ದಾರೆ.

20ನೇ ವಯಸ್ಸಿನಲ್ಲಿ ಮಣಿರತ್ನಂ ಅವರ ‘ರೋಜಾ’ ಸಿನೆಮಕ್ಕೆ ಸಂಗೀತ ನಿರ್ದೇಶನ ಮಾಡಿ ಪ್ರಸಿದ್ಧಿಗೆ ಬಂದ ರಹಮಾನ್, ತಮ್ಮ ಕುಟುಂಬದವರೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ರೋಜಾ ಸಿನೆಮದ ಸಂಗೀತದಿಂದ ಸಂಗೀತ ಮತ್ತು ಧ್ವನಿಯ ವ್ಯಾಕರಣವನ್ನೇ ಬದಲಿಸಿದ ರಹಮಾನ್, ಬಳಿಕ ಖ್ಯಾತಿಯ ಉತ್ತುಂಗಕ್ಕೇರಿದ್ದರಲ್ಲದೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ರಹಮಾನ್ ಜೀವನಚರಿತ್ರೆ

 ಸಾಹಿತಿ ಕೃಷ್ಣ ತ್ರಿಲೋಕ್ ಬರೆದಿರುವ ರಹ್ಮಾನ್ ಜೀವನಚರಿತ್ರೆ ‘ನೋಟ್ಸ್ ಆಫ್ ಎ ಡ್ರೀಮ್: ದಿ ಅಥರೈಸ್ಡ್ ಬಯೋಗ್ರಫಿ ಆಫ್ ಎ.ಆರ್. ರಹಮಾನ್’ ಶನಿವಾರ ಬಿಡುಗಡೆಗೊಂಡಿದೆ. ಲ್ಯಾಂಡ್‌ಮಾರ್ಕ್ ಮತ್ತು ಪೆಂಗ್ವಿನ್ ರ್ಯಾಂಡಮ್ ಹೌಸ್ ಕೃತಿಯ ಪ್ರಕಾಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News