ಶಬರಿಮಲೆ ವಿವಾದ ನಮಗೆ ಒಳ್ಳೆಯ ಅವಕಾಶ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಕ್ಯಾಮರಾದಲ್ಲಿ ಸೆರೆ

Update: 2018-11-05 14:31 GMT

#“ದೇವಳದ ಮುಖ್ಯ ಅರ್ಚಕರು ನನ್ನ ಸಲಹೆ ಪಡೆದಿದ್ದರು”

#ಬಿಜೆಪಿಯ ಕೆಟ್ಟ ರಾಜಕೀಯ ಬಹಿರಂಗ ಎಂದ ಪಿಣರಾಯಿ ವಿಜಯನ್

ಕೊಚ್ಚಿ, ನ.5: 10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಪ್ರವೇಶಿಸುವುದಾದರೆ ದೇವಳದ ಬಾಗಿಲನ್ನೇ ಮುಚ್ಚುತ್ತೇನೆ ಎಂದು ಹೇಳುವ ಮುನ್ನ ದೇವಳದ ಮುಖ್ಯ ಅರ್ಚಕರು ತನ್ನಿಂದ ಸಲಹೆಗಳನ್ನು ಕೇಳಿದ್ದರು ಎಂದು ಕೇರಳ ಬಿಜೆಪಿ ಮುಖ್ಯಸ್ಥ ಪಿ.ಎಸ್. ಶ್ರೀಧರನ್ ಪಿಳ್ಳೈ ಹೇಳುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಹೊಸ ವಿವಾದ ಸೃಷ್ಟಿಸಿದೆ.

ಸನ್ನಿಧಾನಂಗೆ ಪೊಲೀಸ್ ರಕ್ಷಣೆಯೊಂದಿಗೆ ಮಹಿಳೆಯರು ಪ್ರವೇಶಿಸಿದರೆ ದೇವಳದ ಬಾಗಿಲು ಮುಚ್ಚುತ್ತೇನೆ ಎಂದು ತಂತ್ರಿ ಕಂದರಾರು ರಾಜೀವರು ಅಕ್ಟೋಬರ್ 19ರಂದು ಎಚ್ಚರಿಕೆ ನೀಡಿದ್ದರು. ನಂತರ ಪೊಲೀಸರು ಶಬರಿಮಲೆಗೆ ತೆರಳಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಹಿಂದಕ್ಕೆ ಕರೆದುಕೊಂಡು ಬಂದಿದ್ದರು.

“ನೀವು ಒಬ್ಬಂಟಿಯಲ್ಲ ಎಂದು ನಾನು ಅವರಿಗೆ ಹೇಳಿದೆ. ನಿಮ್ಮೊಂದಿಗೆ ಸಾವಿರಾರು ಜನರಿದ್ದಾರೆ. ನಾನು ಹೀಗೆ ಹೇಳಿದಾಗ ಈ ಒಂದು ಮಾತು ಸಾಕು ಎಂದವರು ಹೇಳಿದರು. ಆ ದಿನವೇ ಅವರು ಆ ನಿರ್ಧಾರ ಕೈಗೊಂಡರು. ಕೇರಳ ಸರಕಾರ ಹಾಗು ಪೊಲೀಸ್ ಇಲಾಖೆ ಹಿಂದಡಿಯಿಡುವಂತೆ ಮಾಡಿದ್ದು ಆ ನಿರ್ಧಾರವೇ. ಶಬರಿಮಲೆ ವಿವಾದ ನಮಗೆ ಒಳ್ಳೆಯ ಅವಕಾಶ. ಈ ಹೋರಾಟವು ಬಿಜೆಪಿಯ ಅಜೆಂಡಾ” ಎಂದು ಪಿಳ್ಳೈ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಕೃಷ್ಣ ದಾಸ್, “ಇದರ ಹಿಂದೆ ರಾಜಕೀಯ ಅಜೆಂಡಾ ಇಲ್ಲ. ಯುವ ಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಅವರು ಈ ರೀತಿ ಹೇಳಿದ್ದಾರೆ” ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್, “ಬಿಜೆಪಿಯ ಕೆಟ್ಟ ರಾಜಕೀಯ ಈ ಮೂಲಕ ಬಹಿರಂಗಗೊಂಡಿದೆ. ಶಬರಿಮಲೆಯಲ್ಲಿ ಸಮಸ್ಯೆ ಸೃಷ್ಟಿಸಲು ಬಿಜೆಪಿ ನಾಯಕರೇ ಪ್ರಯತ್ನಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಿದೆ. ರಾಜ್ಯಾಧ್ಯಕ್ಷರೇ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಗಮನಿಸಬೇಕು. ಇದು ಖಂಡನಾರ್ಹ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News