ಸೌದಿಯ ಪ್ರಪ್ರಥಮ ಪರಮಾಣು ರಿಯಾಕ್ಟರ್ ಯೋಜನೆಗೆ ಚಾಲನೆ ನೀಡಿದ ರಾಜಕುಮಾರ ಸಲ್ಮಾನ್

Update: 2018-11-06 10:29 GMT

ರಿಯಾದ್, ನ. 6: ಸೌದಿ ಅರೇಬಿಯಾದ ಪ್ರಪ್ರಥಮ ಪರಮಾಣು ರಿಯಾಕ್ಟರ್ ಯೋಜನೆಗೆ ಸೌದಿ ರಾಜಕುಮಾರ್ ಮುಹಮ್ಮದ್ ಬಿನ್ ಸಲ್ಮಾನ್ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ರಿಯಾದ್ ನಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಸಿಟಿ ಫಾರ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿಗೆ ಭೇಟಿ ನೀಡಿದ ಸಂದರ್ಭ ರಾಜಕುಮಾರ ಘೋಷಿಸಿದ ಏಳು  ಯೋಜನೆಗಳಲ್ಲಿ ಇದು ಒಂದಾಗಿದೆ.

ಈ ಸಂಶೋಧನಾ ರಿಯಾಕ್ಟರ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾಗಿದ್ದು ಎಷ್ಟು ವೆಚ್ಚದಲ್ಲಿ ನಿರ್ಮಾಣವಾಗುವುದು ಎಂಬುದೂ ತಿಳಿದಿಲ್ಲ, ಆದರೆ ಈ ಪರಮಾಣು ರಿಯಾಕ್ಟರ್ ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಲ್ಪಡುವುದು. ಕಳೆದ ಮಾರ್ಚ್ ತಿಂಗಳಲ್ಲಿ ಇರಾನ್ ಬಗ್ಗೆ ಪ್ರತಿಕ್ರಿಯಿಸಿದ್ದ ಸೌದಿ ರಾಜಕುಮಾರ, ಇರಾನ್ ಪರಮಾಣು ಅಸ್ತ್ರವನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ರಿಯಾದ್ ಕೂಡ ಅದನ್ನು ಅಭಿವೃದ್ಧಿ ಪಡಿಸುವುದು ಎಂದಿದ್ದರು.

ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಇರಾನ್ ದೇಶದ ಪರಮೋಚ್ಛ ನಾಯಕನನ್ನು ಹಿಟ್ಲರ್‍ಗೆ ಹೋಲಿಸಿದ್ದರು. ಇರಾನ್‍ನ ಪರಮಾಣು ಯೋಜನೆಗಳನ್ನು ಅಮೆರಿಕಾ ಸದಾ ವಿರೋಧಿಸುವುದೆಂದು ಹಾಗೂ ನಿರ್ಬಂಧಗಳನ್ನು ಮುಂದುವರಿಸುವುದೆಂದು ಘೋಷಿಸಿದ ಬೆನ್ನಲ್ಲೇ ಸೌದಿ ಅರೇಬಿಯಾ ತನ್ನ ಪರಮಾಣು ರಿಯಾಕ್ಟರ್ ಯೋಜನೆಯ ಬಗ್ಗೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News