ಅಹ್ಮದಾಬಾದ್ ಹೆಸರನ್ನು ‘ಕರ್ಣಾವತಿ’ ಎಂದು ಬದಲಿಸಲು ಚಿಂತನೆ: ಗುಜರಾತ್ ಸರ್ಕಾರ

Update: 2018-11-07 07:37 GMT

ಅಹ್ಮದಾಬಾದ್, ನ.7: ಉತ್ತರ ಪ್ರದೇಶದ ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯಾ ಎಂದು ಆದಿತ್ಯನಾಥ್ ಮರುನಾಮಕರಣ ಮಾಡಿದ ಬೆನ್ನಲ್ಲೇ, ಯಾವುದೇ ಕಾನೂನು ತೊಡಕು ಇಲ್ಲದಿದ್ದಲ್ಲಿ ಗುಜರಾತ್ ನ ಅಹ್ಮದಾಬಾದ್ ಹೆಸರನ್ನು ‘ಕರ್ಣಾವತಿ’ ಎಂದು ಮರುನಾಮಕರಣ ಮಾಡಲು ಉತ್ಸುಕರಾಗಿರುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ.

"ಎಲ್ಲ ಕಾನೂನು ತೊಡಕುಗಳು ನಿವಾರಣೆಯಾಗಿ ಸೂಕ್ತ ಬೆಂಬಲ ಸಿಕ್ಕಿದಲ್ಲಿ, ಅಹ್ಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಮರುನಾಮಕರಣ ಮಾಡಲು ಬಿಜೆಪಿ ಸರ್ಕಾರ ಉತ್ಸುಕವಾಗಿದೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

"ಅಹ್ಮದಾಬಾದ್ ಹಸರನ್ನು ಕರ್ಣಾವತಿ ಎಂದು ನಾಮಕರಣ ಮಾಡಬೇಕು ಎಂಬ ಭಾವನೆ ಇಂದಿಗೂ ಜನರಲ್ಲಿದೆ. ಕಾನೂನು ತಡೆಗಳನ್ನು ನಿವಾರಿಸಲು ಅಗತ್ಯ ಬೆಂಬಲ ಸಿಕ್ಕಿದಲ್ಲಿ, ನಗರದ ಹೆಸರು ಬದಲಾವಣೆಗೆ ನಾವು ಸಿದ್ಧರಿದ್ದೇವೆ" ಎಂದು ವಿಶ್ವ ಪರಂಪರೆ ನಗರ ಎಂಬ ಹೆಗ್ಗಳಿಕೆ ದೊರಕಿರುವ ಅಹ್ಮದಾಬಾದ್‍ನ ಹೆಸರು ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಐತಿಹಾಸಿಕವಾಗಿ ಅಹ್ಮದಾಬಾದ್‍ನ ಸುತ್ತಮುತ್ತಲು ಜನವಸತಿ 11ನೇ ಶತಮಾನದಿಂದಲೂ ಇದ್ದು, ಈ ಪ್ರದೇಶವನ್ನು ಅಶವಾಲ್ ಎಂದು ಕರೆಯಲಾಗುತ್ತಿತ್ತು. ಚಾಲುಕ್ಯ ದೊರೆ ಕರ್ಣ, ಅಶವಾಲ್‍ನ ಭಿಲ್ ಅರಸನನ್ನು ಜಯಿಸಿ, ಸಾಬರಮತಿ ನದಿದಂಡೆಯಲ್ಲಿ ಕರ್ಣಾವತಿ ಎಂಬ ನಗರ ನಿರ್ಮಿಸಿದ್ದ. ಸುಲ್ತಾನ್ ಅಹ್ಮದ್ ಶಾ 1411ರಲ್ಲಿ ಕರ್ಣಾವತಿ ಬಳಿ ಹೊಸ ಆವರಣಗೋಡೆ ಇರುವ ನಗರಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಆ ಪ್ರದೇಶದಲ್ಲಿ ವಾಸವಿದ್ದ ಅಹ್ಮದ್ ಹೆಸರಿನ ನಾಲ್ವರು ಸಂತರ ಗೌರವಾರ್ಥವಾಗಿ ಅಹ್ಮದಾಬಾದ್ ಎಂದು ನಾಮಕರಣ ಮಾಡಿದ್ದರು.

ಆದರೆ ನಗರ ಮರುನಾಮಕಣ ಪ್ರಸ್ತಾವ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ಟೀಕಿಸಿದ್ದಾರೆ. ಹಿಂದೂಗಳ ಮತ ಸೆಳೆಯಲು ಈ ತಂತ್ರಕ್ಕೆ ಆಡಳಿತಾರೂಢ ಬಿಜೆಪಿ ಮುಂದಾಗಿದೆ ಎಂದು ಅವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News