ನ.19 ಆರ್‌ಬಿಐ ಪಾಲಿಗೆ ನಿರ್ಣಾಯಕ ದಿನ: ಚಿದಂಬರಂ

Update: 2018-11-08 14:26 GMT

ಹೊಸದಿಲ್ಲಿ,ನ.8: ಸರಕಾರವು ಆರಬಿಐನ ಮೀಸಲು ನಿಧಿಯಿಂದ ದೊಡ್ಡ ಮೊತ್ತಕ್ಕಾಗಿ ಆಗ್ರಹಿಸುತ್ತಿದ್ದು,ಇದು ಅವುಗಳ ನಡುವಿನ ಕಲಹಕ್ಕೆ ಕಾರಣವಾಗಿದೆ ಎಂದು ಗುರುವಾರ ಇಲ್ಲಿ ಹೇಳಿದ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರು, ಹಣವನ್ನು ನೀಡಲು ನಿರಾಕರಿಸಿರುವ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಹದ್ದುಬಸ್ತಿನಲ್ಲಿಡಲೆಂದೇ ಸರಕಾರವು ಈ ಹಿಂದೆಂದೂ ಬಳಕೆಯಾಗಿರದಿದ್ದ ಆರ್‌ಬಿಐ ಕಾಯ್ದೆಯ ಕಲಂ 7ನ್ನು ಹೇರಿದೆ ಎಂದು ಆರೋಪಿಸಿದರು. ಆರ್‌ಬಿಐ ಆಡಳಿತ ಮಂಡಳಿಯ ಸಭೆಯು ನಿಗದಿಯಾಗಿರುವ ನ.19 ನಿರ್ಣಾಯಕ ದಿನವಾಗಿದ್ದು, ಪಟೇಲ್ ತನ್ನ ನಿಲುವಿಗೆ ಅಂಟಿಕೊಂಡಿರುತ್ತಾರೆ ಎಂದು ತಾನು ಆಶಿಸಿದ್ದೇನೆ ಎಂದರು.

ಆರ್‌ಬಿಐ ಮೇಲೆ ಒತ್ತಡ ಹೇರುವುದು ಮತ್ತು ಪಟೇಲ್ ಅವರು ರಾಜೀನಾಮೆ ನೀಡುವಂತೆ ಬಲವಂತಗೊಳಿಸುವುದು ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಆರ್‌ಬಿಐನ ಮೀಸಲು ನಿಧಿಯಿಂದ ಒಂದು ಲಕ್ಷ ಕೋಟಿ ರೂ.ಗಳನ್ನು ನೀಡುವಂತೆ ಸರಕಾರವು ಒತ್ತಾಯಿಸುತ್ತಿದೆ ಎಂದು ಆರೋಪಿಸಿದ ಅವರು,ವಿತ್ತೀಯ ಕೊರತೆಯನ್ನೆದುರಿಸುತ್ತಿದ್ದರೂ 2019ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಸರಕಾರವು ವೆಚ್ಚವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಹಣ ನೀಡಲು ಪಟೇಲ್ ನಿರಾಕರಿಸಿದಾಗ ಸರಕಾರವು ಕಲಂ 7ನ್ನು ಹೇರುವ ಅಭೂತಪೂರ್ವ ಕ್ರಮವನ್ನು ತೆಗೆದುಕೊಂಡಿದೆ ಎಂದ ಅವರು,ಇಂತಹ ಸ್ಥಿತಿಯಲ್ಲಿ ಹಣವನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ಅಥವಾ ತನ್ನ ಹುದ್ದೆಗೆ ರಾಜೀನಾಮೆ ನೀಡುವ ಎರಡೇ ಆಯ್ಕೆಗಳು ಪಟೇಲ್ ಮುಂದಿವೆ ಎಂದು ತಿಳಿಸಿದರು.

ಸರಕಾರವು ಆರ್‌ಬಿಐ ಮಂಡಳಿಯಲ್ಲಿ ತನ್ನ ಜನರನ್ನು ತುಂಬುತ್ತಿದೆ ಎಂದು ಆರೋಪಿಸಿದ ಅವರು,ಸಭೆಯಲ್ಲಿ ತನ್ನ ಪ್ರಸ್ತಾವವು ಅಂಗೀಕಾರಗೊಳ್ಳುವಂತೆ ಎಲ್ಲ ಪ್ರಯತ್ನಗಳನ್ನೂ ಅದು ಮಾಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News