ರಶ್ಯ ತನಿಖೆಗೆ ಅತೃಪ್ತಿ: ಅಟಾರ್ನಿ ಜನರಲ್‌ರನ್ನು ಉಚ್ಚಾಟಿಸಿದ ಟ್ರಂಪ್
ವಾಶಿಂಗ್ಟನ್, ನ. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಟಾರ್ನಿ ಜನರಲ್ ಜೆಫ್ ಸೆಶನ್ಸ್‌ರನ್ನು ಉಚ್ಚಾಟಿಸಿದ್ದಾರೆ.
ಟ್ರಂಪ್ ಹಲವು ತಿಂಗಳುಗಳಿಂದ ತನ್ನ ಉನ್ನತ ಕಾನೂನು ಅಧಿಕಾರಿಯನ್ನು ಟೀಕಿಸುತ್ತಾ ಬಂದಿದ್ದರು. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಸೆಶನ್ಸ್ ನಿರಾಕರಿಸಿರುವುದು ಅವರ ಮೇಲಿನ ಟ್ರಂಪ್ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಸೆಶನ್ಸ್‌ರ ಸಿಬ್ಬಂದಿ ಮುಖ್ಯಸ್ಥ ಮ್ಯಾಥ್ಯೂ ವಿಟೇಕರ್ ಅಟಾರ್ನಿ ಜನರಲ್ ಹುದ್ದೆಯನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳಲಿದ್ದಾರೆ. ರಶ್ಯ ಹಸ್ತಕ್ಷೇಪ ಕುರಿತ ತನಿಖೆಯನ್ನು ವಿಟೇಕರ್ ಟೀಕಿಸಿರುವುದನ್ನು ಸ್ಮರಿಸಬಹುದಾಗಿದೆ.
ಟ್ರಂಪ್ ಚುನಾವಣಾ ಪ್ರಚಾರ ತಂಡ ಮತ್ತು ರಶ್ಯದ ನಡುವೆ ಇತ್ತೆನ್ನಲಾದ ಸಂಪರ್ಕದ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮಲ್ಲರ್ ತನಿಖೆ ನಡೆಸುತ್ತಿದ್ದಾರೆ.
ಮಲ್ಲರ್‌ರ ವಿಸ್ತೃತ ತನಿಖೆಯ ಫಲವಾಗಿ ಟ್ರಂಪ್‌ರ ಹಲವಾರು ಅನುಯಾಯಿಗಳ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.
ನನ್ನ ವಿರುದ್ಧ ತನಿಖೆ ನಡೆದರೆ ನಾನೂ ತನಿಖೆ ನಡೆಸುವೆ: ಟ್ರಂಪ್
ಮಧ್ಯಂತರ ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಅನುಭವಿಸಿದ ಒಂದು ದಿನದ ಬಳಿಕ, ರಶ್ಯ ತನಿಖೆಯಲ್ಲಿ ಸಹಕರಿಸದ ಅಟಾರ್ನಿ ಜನರಲ್‌ರನ್ನು ಡೊನಾಲ್ಡ್ ಟ್ರಂಪ್ ಉಚ್ಚಾಟಿಸಿದ್ದಾರೆ.
ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತವನ್ನು ಗಳಿಸಿದರೆ, ಸಂಸತ್ತಿನ ಇನ್ನೊಂದು ಅಂಗವಾಗಿರುವ ಸೆನೆಟ್‌ನಲ್ಲಿ ಟ್ರಂಪ್‌ರ ರಿಪಬ್ಲಿಕನ್ ಪಕ್ಷ ತನ್ನ ಬಲವನ್ನು ವೃದ್ಧಿಸಿಕೊಂಡಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ನಿಯಂತ್ರಣವನ್ನು ಡೆಮಾಕ್ರಟಿಗರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಟ್ರಂಪ್ ಹಾಗೂ ಅವರ ಆಡಳಿತದ ವಿರುದ್ಧ ತನಿಖೆ ನಡೆಸುವ ಅಧಿಕಾರವನ್ನು ಅವರು ಪಡೆದುಕೊಂಡಿದ್ದಾರೆ. ವಾಸ್ತವವಾಗಿ, ಟ್ರಂಪ್ ವಿರುದ್ಧ ತನಿಖೆ ನಡೆಸುವ ಇಂಗಿತವನ್ನು ಕೆಲವು ಡೆಮಾಕ್ರಟಿಗರು ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಈ ಬಗ್ಗೆ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.
ಡೆಮಾಕ್ರಟಿಗರು ನನ್ನ ವಿರುದ್ಧ ತನಿಖೆಗೆ ಮುಂದಾದರೆ, ಅವರ ವಿರುದ್ಧ ನನ್ನದೇ ತನಿಖೆ ನಡೆಸುವ ಮೂಲಕ ನಾನು ಪ್ರತೀಕಾರ ತೀರಿಸುತ್ತೇನೆ ಎಂಬ ಎಚ್ಚರಿಕೆಯನ್ನು ಟ್ರಂಪ್ ನೀಡಿದರು.