ಚಲೋ ಅಯೋಧ್ಯ: ಕರೆ ನೀಡಿದ ಶಿವಸೇನೆ

Update: 2018-11-08 14:58 GMT

ಮುಂಬೈ, ನ.8: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಷಯಕ್ಕೆ ಪ್ರಾಧಾನ್ಯತೆ ನೀಡುವುದಾಗಿ ತಿಳಿಸಿರುವ ಶಿವಸೇನೆ, ಜನತೆ ‘ಚಲೋ ಅಯೋಧ್ಯ’ ಎಂಬ ಉಕ್ತಿಯನ್ನು ಪಠಿಸುವಂತೆ ಕರೆ ನೀಡಿದೆ. ಬುಧವಾರ ಠಾಣೆಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ, ರಾಮನ ಜನ್ಮಸ್ಥಳ ಎಂದು ಪರಿಗಣಿಸಲಾಗಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಒತ್ತಾಯಿಸಲು ಚಲೋ ಅಯೋಧ್ಯ ಎಂದು ಪಠಿಸುವಂತೆ ಜನತೆಗೆ ಕರೆ ನೀಡಿದರು.

‘ಚಲೋ ಅಯೋಧ್ಯ’ ಕರೆಯ ಬಳಿಕ ದೇಶದಾದ್ಯಂತ ಧಾರ್ಮಿಕ ಉತ್ಸಾಹ, ಸಂಭ್ರಮದ ವಾತಾವರಣ ನೆಲೆಸಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದ ನವೆಂಬರ್ 8ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಹಣತೆಯ ದೀಪಗಳನ್ನು ಬೆಳಗಲಾಗಿದ್ದು ದೂರದಲ್ಲಿ ನಿಂತು ನೋಡಿದರೆ ದೀಪಗಳ ಬೆಳಕಿನಲ್ಲಿ ‘ಚಲೋ ಅಯೋಧ್ಯ’ ಎಂಬ ಪದಗಳು ಮೂಡಿದಂತೆ ಭಾಸವಾಗುತ್ತಿತ್ತು ಎಂದು ಲೇಖನದಲ್ಲಿ ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರವನ್ನು ಯಾವುದೇ ಬೆಲೆ ತೆತ್ತಾದರೂ ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News