ಹೆಪಟೈಟಿಸ್ ಎ ಕುರಿತು ನೀವು ತಿಳಿದಿರಲೇಬೇಕಾದ ಮಾಹಿತಿಗಳಿಲ್ಲಿವೆ

Update: 2018-11-09 10:36 GMT

ಹೆಪಟೈಟಿಸ್ ಎ(ಎಚ್‌ಎವಿ) ಸೋಂಕಿಗೊಳಗಾಗಿರುವ ವ್ಯಕ್ತಿಗಳ ಮಲದಲ್ಲಿ ಹೆಪಟೈಟಿಸ್ ಎ ವೈರಸ್ ಕಂಡು ಬರುತ್ತದೆ. ಎಚ್‌ಎವಿ ಸೋಂಕಿಗೊಳಗಾದ ವ್ಯಕ್ತಿಗಳಲ್ಲಿ ಅದರ ಲಕ್ಷಣಗಳು ಕಂಡು ಬರುವ ಮೊದಲೇ ಸೋಂಕು ಅವರಿಂದ ಇನ್ನೊಬ್ಬರಿಗೆ ಹರಡತೊಡಗುತ್ತದೆ. ಜಾಂಡಿಸ್ ಅಥವಾ ಕಾಮಾಲೆಗೆ ಗುರಿಯಾದ ಬಳಿಕ ಸುಮಾರು 7-8 ದಿನಗಳವರೆಗೂ ರೋಗಿಯಲ್ಲಿ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಸಾಮರ್ಥ್ಯವಿರುತ್ತದೆ.

► ಹೆಪಟೈಟಿಸ್ ಎ ಸೋಂಕಿಗೆ ಕಾರಣಗಳು

ಮಲ-ಬಾಯಿ ಮಾರ್ಗದ ಮೂಲಕ ಎಚ್‌ಎವಿ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು ಅತ್ಯಂತ ಸಾಮಾನ್ಯವಾಗಿದೆ. ಅದು ಸೋಂಕುಪೀಡಿತ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ನೀರು ಅಥವಾ ಆಹಾರದ ಮೂಲಕ ಹರಡುತ್ತದೆ.

ಅನೈಮರ್ಲ್ಯವು ಎಚ್‌ಎವಿ ಸೋಂಕು ಹರಡಲು ಅತ್ಯಂತ ಸಾಮಾನ್ಯ ಕಾರಣವಾಗಿದೆ. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದರಿಂದ,ಶುದ್ಧ ಕುಡಿಯುವ ನೀರನ್ನು ಬಳಸುವುದರಿಂದ ಮತ್ತು ಹೆಚ್ಚಿನ ನೈರ್ಮಲ್ಯ ಕಾಯ್ದುಕೊಳ್ಳುವುದರಿಂದ ಹೆಪಟೈಟಿಸ್ ಎ ವೈರಸ್‌ನ ಸೋಂಕಿನಿಂದ ಪಾರಾಗಬಹುದು.

ಸಿಪ್ಪೆ ತೆಗೆಯಲಾಗದ,ಕಲುಷಿತ ನೀರಿನಿಂದ ತೊಳೆಯಲ್ಪಟ್ಟ ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಚರಂಡಿಯ ಕೊಳಕು ಸೇರಿದ ನೀರಿನಲ್ಲಿ ಬೆಳೆದ ಅರೆಬೆಂದ ಚಿಪ್ಪುಮೀನುಗಳ ಸೇವನೆಯ ಮೂಲಕವೂ ಎಚ್‌ಎವಿ ಸೋಂಕು ಹರಡುತ್ತದೆ. ತೀರ ಅಪರೂಪವಾಗಿ ರಕ್ತದ ಮೂಲಕವೂ ಈ ಸೋಂಕು ತಗುಲಬಹುದು.

► ಹೆಪಟೈಟಿಸ್ ಎ ಸೋಂಕಿನ ಲಕ್ಷಣಗಳು

ಹೆಪಟೈಟಿಸ್ ಎ ಸಾಮಾನ್ಯವಾಗಿ ಸೌಮ್ಯ ರೂಪದ ಸೋಂಕು ಆಗಿದ್ದು, ಹೆಚ್ಚಿನವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಪ್ರಕಟವಾಗದಿರಬಹುದು. ಹೆಚ್ಚಾಗಿ ವಯಸ್ಸಾದವರಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದ ಸೋಂಕುಪೀಡಿತ ವ್ಯಕ್ತಿಗಳೂ ಈ ಸೋಂಕನ್ನು ಇತರರಿಗೆ ಹರಡಬಲ್ಲರು. ಸಾಮಾನ್ಯವಾಗಿ ಸೋಂಕು ತಗುಲಿದ 2ರಿಂದ 6 ವಾರಗಳ ಅವಧಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ವಾಕರಿಕೆ ಮತ್ತು ವಾಂತಿ,ಅತಿಸಾರ(ಮಕ್ಕಳಲ್ಲಿ ಹೆಚ್ಚು ಸಾಮಾನ್ಯ),ಸೌಮ್ಯ ಜ್ವರ,ಹಸಿವು ಕ್ಷೀಣ,ದದ್ದುಗಳು,ಬಳಲಿಕೆ,ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು(ಕಾಮಾಲೆ),ಗಾಢ ಹಳದಿ ಅಥವಾ ಕಂದುಬಣ್ಣದ ಮೂತ್ರ, ಹೊಟ್ಟೆಯ ಬಲಭಾಗದಲ್ಲಿ ಯಕೃತ್ತು ಇರುವ ಜಾಗದಲ್ಲಿ ನೋವು ಇವು ಹೆಪಟೈಟಿಸ್ ಎ ಸೋಂಕಿನ ಲಕ್ಷಣಗಳಾಗಿವೆ.

ಸೋಂಕುಪೀಡಿತ ವ್ಯಕ್ತಿಗೆ ಪದೇಪದೇ ವಾಂತಿಯಾಗುತ್ತಿದ್ದರೆ ಶರೀರದಲ್ಲಿ ನಿರ್ಜಲೀಕರಣವಾಗಬಹುದು. ನಿಶ್ಶಕ್ತಿ,ಬಳಲಿಕೆ,ಏಕಾಗ್ರತೆಗೆ ಕಷ್ಟ,ತೀವ್ರ ಎದೆಬಡಿತ, ಅತಿಯಾದ ಬಾಯಾರಿಕೆ,ಕಡಿಮೆ ಮೂತ್ರವಿಸರ್ಜನೆ,ತಲೆನೋವು ಇತ್ಯಾದಿಗಳು ನಿರ್ಜಲೀಕರಣದ ಲಕ್ಷಣಗಳಾಗಿವೆ.

ಎಚ್‌ಎವಿ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮಾಯವಾಗುತ್ತವೆ. ಆದರೆ ಅಪರೂಪಕ್ಕೆ ಇನ್ನಷ್ಟು ಹೆಚ್ಚು ಕಾಲ,ಕೆಲವೊಮ್ಮೆ ಒಂಭತ್ತು ತಿಂಗಳವರೆಗೂ ಮುಂದುವರಿಯಬಹುದು. ಕೆಲವು ಅಧ್ಯಯನಗಳಂತೆ ಶೇ.15ರಷ್ಟು ರೋಗಿಗಳಲ್ಲಿ ಈ ಸೋಂಕು 6ರಿಂದ 9 ತಿಂಗಳುಗಳ ವರೆಗೂ ಇರುತ್ತದೆ. ಎಚ್‌ಎವಿ ಸೋಂಕಿಗೊಳಗಾದ ಹೆಚ್ಚಿನವರು ಯಾವುದೇ ಚಿಕಿತ್ಸೆಯಿಲ್ಲದೆ ಗುಣಮುಖರಾಗುತ್ತಾರೆ.

► ಚಿಕಿತ್ಸೆ

ಸದ್ಯಕ್ಕೆ ಹೆಪಟೈಟಿಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ.ಹೆಚ್ಚಿನವರಲ್ಲಿ ಈ ಸೋಂಕು ಸ್ವಯಂ ನಿಯಂತ್ರಿತ ರೋಗವಾಗಿದ್ದು,ನೆಪಮಾತ್ರಕ್ಕೆ ಚಿಕಿತ್ಸೆ ಅಗತ್ಯವಾಗಬಹುದು. ಸಾಮಾನ್ಯವಾಗಿ ವೈದ್ಯರು ರೋಗಿಯಲ್ಲಿನ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡುತ್ತಾರೆ. ಸೋಕಿನ ಲಕ್ಷಣವಾಗಿ ಜ್ವರವಿದ್ದಾಗ ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಸೇವಿಸಕೂಡದು. ಎಸಿಟಾಮಿನೊಫೆನ್‌ನಂತಹ ಮಾತ್ರೆಗಳು ಯಕೃತ್ತಿಗೆ ಹಾನಿಯನ್ನುಂಟು ಮಾಡಬಹುದು.

ಹೆಚ್ಚಿನ ಎಚ್‌ಎವಿ ಸೋಂಕುಪೀಡಿತರು ರೋಗನಿರ್ಧಾರದ ಬಳಿಕ ಮನೆಯಲ್ಲಿಯೇ ಇದ್ದುಕೊಂಡು ಚಿಕಿತ್ಸೆ ಪಡೆಯಬಹುದು. ಆದರೆ ಲಕ್ಷಣಗಳು ಗಂಭೀರವಾಗಿದ್ದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

ಹೆಪಟೈಟಿಸ್ ಎ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವ ಮೂಲಕ ಹೆಚ್ಚಿನ ಬಾಧೆಯಿಂದ ಪಾರಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News