ಶಬರಿಮಲೆ ಪ್ರತಿಭಟನೆ: ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ, ನ.9: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಆರೋಪದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೈ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ರಕರ್ತ ಶಿಬಿನ್ ಎಂಬವರು ನೀಡಿದ್ದ ದೂರಿನಂತೆ ಶ್ರೀಧರನ್ ವಿರುದ್ಧ ಕೋಝಿಕೋಡ್‌ನಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಧರನ್, ತನ್ನ ಹೆಸರಿಗೆ ಮಸಿ ಬಳಿಯಲು ಸಿಪಿಎಂ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು ಈ ಅಭಿಯಾನದ ಭಾಗವಾಗಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಅಕ್ಟೋಬರ್ 17ರಂದು ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದ ಸಂದರ್ಭ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಪಡಿಸಲಾಗಿತ್ತು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ್ದ ಶ್ರೀಧರನ್ ಪಿಳ್ಳೈ, ಇದು ಯೋಜಿತ ಪ್ರತಿಭಟನೆಯಾಗಿತ್ತು ಮತ್ತು ಪಕ್ಷ ಇದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, ಕೇರಳದಲ್ಲಿ ಎನ್‌ಡಿಎ ಘಟಕ ಪಕ್ಷವಾಗಿರುವ ಭಾರತ್ ಧರ್ಮ ಜನ ಸೇನಾದ ಮುಖಂಡ ತುಷಾರ್ ವೆಲ್ಲಪಳ್ಳಿ ಹಾಗೂ ಶ್ರೀಧರನ್ ಪಿಳೈ ನೇತೃತ್ವದಲ್ಲಿ ಶಬರಿಮಲೆ ಸಂರಕ್ಷಣಾ ರಥಯಾತ್ರೆಗೆ ಗುರುವಾರ ಕಾಸರಗೋಡಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ ಕೆಲವೇ ಹೊತ್ತಿನಲ್ಲಿ ಪಯ್ಯನೂರು ಸಮೀಪ ರಥಯಾತ್ರೆಗೆ ಕಲ್ಲು ತೂರಾಟ ನಡೆದಿದೆ. ಇದನ್ನು ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಕರೆ ನೀಡಿದೆ.
ಇದೇ ವೇಳೆ, ಕಾಂಗ್ರೆಸ್ ಕೂಡಾ ರಾಜ್ಯಾದ್ಯಂತ ಐದು ರ್ಯಾಲಿ ನಡೆಸುವುದಾಗಿ ತಿಳಿಸಿದ್ದು ಕೆ.ಮುರಳೀಧರನ್, ಕೆ.ಸುಧಾಕರನ್ ಸಹಿತ ಐವರು ಮುಖಂಡರು ನೇತೃತ್ವ ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿ ಬಂಧಿತನಾಗಿದ್ದ ಗೋವಿಂದ್ ಮಧುಸೂಧನ್ ಎಂಬವರ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಗುರುವಾರ ತಳ್ಳಿಹಾಕಿದೆ. ಪ್ರತಿಭಟನೆ ಸುಪ್ರೀಂಕೋರ್ಟ್ ಆದೇಶದ ವಿರುದ್ಧವಾಗಿರುವ ಕಾರಣ ಸ್ವೀಕಾರಾರ್ಹವಲ್ಲ . ಜಾಮೀನು ಅರ್ಜಿಯನ್ನು ಪರಿಗಣಿಸಿದರೆ ಇದು ತಪ್ಪು ಸಂದೇಶ ರವಾನಿಸಲಿದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.