×
Ad

ಪಟಾಕಿ ಸಿಡಿಸುವ ಸೂಚನೆ ಉಲ್ಲಂಘನೆ: ದಿಲ್ಲಿಯಲ್ಲೇ 300ಕ್ಕೂ ಹೆಚ್ಚು ಬಂಧನ

Update: 2018-11-09 19:38 IST

ಹೊಸದಿಲ್ಲಿ, ನ.9: ಪಟಾಕಿ ಸಿಡಿಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸದ ಹಿನ್ನೆಲೆಯಲ್ಲಿ ಪೊಲೀಸರು ದಿಲ್ಲಿ ನಗರದಲ್ಲೇ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು , 562 ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧಿತರನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸಲು ನಿರಾಕರಿಸಿದ 24 ಬಾಲಾಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಿಲ್ಲಿ ಪೊಲೀಸರ ವಕ್ತಾರ ಮಧುರ್ ವರ್ಮ ತಿಳಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಬೇಕೆಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಸೂಚಿಸಿತ್ತು. ಹಸಿರು ಪಟಾಕಿ ಕಡಿಮೆ ಶಬ್ದ ಮಾಡುತ್ತದಲ್ಲದೆ ಕಡಿಮೆ ಹೊಗೆಯನ್ನು ಹೊರಸೂಸುತ್ತದೆ. ಆದರೆ ಹಸಿರು ಪಟಾಕಿ ಅಲಭ್ಯವಾದ ಕಾರಣ ಈ ಹಿಂದಿನ ಪಟಾಕಿಯನ್ನೇ ಮಾರಾಟ ಮಾಡಲಾಗಿತ್ತು ಮತ್ತು ಇದರಿಂದ ದಿಲ್ಲಿಯ ವಾಯುಮಾಲಿನ್ಯ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿತ್ತು. ನಿಷೇಧಿತ ಪಟಾಕಿ ಮಾರಾಟ ಅಥವಾ ಪಟಾಕಿ ಸಿಡಿಸುವ ಎರಡು ಗಂಟೆಗಳ ಅವಧಿಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಠಾಣಾಧಿಕಾರಿಯನ್ನು ಹೊಣೆಯಾಗಿಸುವುದಾಗಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಆದರೆ ಇವನ್ನು ರಹಸ್ಯವಾಗಿ ಮಾರಾಟ ಮಾಡುತ್ತಿರುವುದನ್ನು ತಡೆಯಲು ಪೊಲೀಸರು ವಿಫಲರಾಗಿದ್ದಾರೆ. ಗುರುವಾರ ದಿಲ್ಲಿಯ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದ್ದು, ರವಿವಾರದವರೆಗೆ ದಿಲ್ಲಿ ನಗರದೊಳಗೆ ಲಾರಿಗಳ ಪ್ರವೇಶವನ್ನು ದಿಲ್ಲಿ ಸರಕಾರ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News