ನಿಮ್ಮ ವೈಚಾರಿಕತೆ ಯಾವುದು: ಎಐಎಡಿಎಂಕೆಗೆ ರಜನಿಕಾಂತ್ ತರಾಟೆ

Update: 2018-11-09 14:14 GMT

ಚೆನ್ನೈ, ನ. 9: ವಿಜಯ್ ನಟನೆಯ ‘ಸರ್ಕಾರ್’ ಚಿತ್ರದ ನಿರ್ದಿಷ್ಟ ದೃಶ್ಯದ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಡಳಿತಾರೂಢ ಎಐಎಡಿಎಂಕೆಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್, ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿಂದಿನ ವೈಚಾರಿಕತೆ ಯಾವುದೇ ಎಂದು ಪ್ರಶ್ನಿಸಿದ್ದಾರೆ.

ನಿರ್ದಿಷ್ಟ ದೃಶ್ಯವನ್ನು ಅಳಿಸುವ ಆಗ್ರಹವನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. ‘‘ಸೆನ್ಸಾರ್ ಮಂಡಳಿ ಪ್ರಮಾಣೀಕೃತ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುವುದು, ಚಿತ್ರ ಪ್ರದರ್ಶನ ತಡೆಯುವುದು ಹಾಗೂ ಬ್ಯಾನರ್‌ಗಳಿಗೆ ಹಾನಿ ಮಾಡುವುದು ಕಾನೂನಿಗೆ ವಿರುದ್ಧ. ಇದು ಖಂಡನೀಯ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳು ಹಾಗೂ ಜಯಲಲಿತಾ ಅವರನ್ನು ಉಲ್ಲೇಖಿಸುವ ಕೆಲವು ದೃಶ್ಯಗಳ ಶಬ್ದವನ್ನು ಮೌನವಾಗಿಸಲು ‘ಸರ್ಕಾರ್’ ಚಿತ್ರದ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ಚಲನಚಿತ್ರ ಮಂಡಳಿ ಗುರುವಾರ ಹೇಳಿತ್ತು.

ವಿವಾದಾತ್ಮಕ ದೃಶ್ಯಗಳನ್ನು ಅಳಿಸುವಂತೆ ಆಗ್ರಹಿಸಿರುವುದಲ್ಲದೆ, ಚಿತ್ರದ ನಿರ್ಮಾಪಕರು ಇದನ್ನು ಅನುಸರಣೆ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಐಎಡಿಎಂಕೆ ಎಚ್ಚರಿಸಿತ್ತು. ನಿರ್ದಿಷ್ಟ ದೃಶ್ಯಗಳು ಹಿಂಸಾಚಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿರುವ ಕಾನೂನು ಸಚಿವ ಸಿ.ವಿ. ಷಣ್ಮುಗಂ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News