ನಿಮ್ಮ ವಾಹನಕ್ಕೆ ವಿಮೆ ಮಾಡಿಸುತ್ತಿದ್ದೀರಾ? ಈ ಲಾಭಗಳು ದೊರೆಯುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ

Update: 2018-11-10 10:58 GMT

ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರೂ ಅದಕ್ಕೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಇದು ಅನಿರೀಕ್ಷಿತ ಸಂದರ್ಭಗಳಲ್ಲಿ ಆರ್ಥಿಕ ನಷ್ಟದ ವಿರುದ್ಧ ರಕ್ಷಣೆ ನೀಡುತ್ತದೆ.

ವಾಹನ ವಿಮೆಯ ಲಾಭಗಳನ್ನು ಪಡೆಯಲು ಎಲ್ಲ ರೀತಿಯಿಂದಲೂ ರಕ್ಷಣೆ ನೀಡುವ ಮತ್ತು ಅದರ ಖರೀದಿಗಾಗಿ ನೀವು ಪಾವತಿಸುವ ಹಣದ ಪ್ರತಿ ಪೈಸೆಗೂ ಅದು ಮೌಲಿಕವಾಗಿರಬೇಕು, ಅಂದರೆ ಅದು ‘ಪೈಸಾ ವಸೂಲ್’ ವಿಮೆಯಾಗಿರಬೇಕು. ವಾಹನ ವಿಮೆ ಪಾಲಿಸಿ ಹೊಂದಿದ್ದರೂ ಅಪಘಾತದ ಸಂದರ್ಭಗಳಲ್ಲಿ ಜೇಬಿನಿಂದ ಹಣವನ್ನು ವೆಚ್ಚ ಮಾಡಲು ಯಾರು ಬಯಸುತ್ತಾರೆ? ನೀವು ವಿಮೆ ಪಾಲಿಸಿ ಖರೀದಿಸಿಯೂ ನಿಮಗೆ ಯಾವುದೇ ಲಾಭಗಳು ದೊರೆಯದಿದ್ದರೆ ಅದು ಯಾವ ಉಪಯೋಗಕ್ಕೂ ಬರುವುದಿಲ್ಲ.

ವಾಹನ ವಿಮೆಯ ಲಾಭ ಪಡೆಯುವುದು ಹೇಗೆ?

ನಿಮಗೆ ವಿಮೆ ರಕ್ಷಣೆ ನೀಡದ ಅಥವಾ ‘ಗುಪ್ತ ವೆಚ್ಚ’ಗಳನ್ನೊಳಗೊಂಡಿರುವ ವಿಮಾ ಪಾಲಿಸಿಯು ನಿಜಕ್ಕೂ ಕೆಟ್ಟ ಪರಿಕಲ್ಪನೆಯಾಗಿದೆ.ಹೀಗಾಗಿ ಪ್ರತಿಯೊಬ್ಬರೂ ತಮ್ಮ ವಾಹನ ವಿಮೆ ಪಾಲಿಸಿಯಿಂದ ಗರಿಷ್ಠ ಲಾಭಗಳನ್ನು ಪಡೆಯಲು ಪ್ರಯತ್ನಿಸಬೇಕು.

ಕಾಂಪ್ರಿಹೆನ್ಸಿವ್ ಟೈಪ್ ಅಥವಾ ಏಕೀಕೃತ ಮಾದರಿಯ ಪಾಲಿಸಿಯಡಿ ಹಕ್ಕುಗಳನ್ನು ಮಂಡಿಸಿದಾಗ ಸವಕಳಿಯ ಹೆಸರಿನಲ್ಲಿ ಭಾರೀ ಮೊತ್ತದ ಕ್ಲೇಮ್ ಹಣವನ್ನು ಕಡಿತಗೊಳಿಸಲಾಗುತ್ತದೆ. ಕಾಲ ಕಳೆದಂತೆ ವಾಹನದ ಮೌಲ್ಯ ಕಡಿಮೆಯಾಗುವುದನ್ನು ಡಿಪ್ರಿಷಿಯೇಷನ್ ಅಥವ ಸವಕಳಿ ಎನ್ನಲಾಗುತ್ತದೆ. ಝೀರೋ ಡಿಪ್ರಿಷಿಯೆಷನ್ ರಕ್ಷಣೆ ಹೊಂದಿರದ ಪಾಲಿಸಿಯನ್ನು ಪೈಸಾವಸೂಲ್ ಪಾಲಿಸಿ ಎಂದು ಕರೆಯುವಂತಿಲ್ಲ. ಕಾನೂನಿಗೆ ಇತ್ತಿಚಿನ ತಿದ್ದುಪಡಿಯ ಬಳಿಕ ವಾಹನ ವಿಮಾ ಪಾಲಿಸಿಯೊಂದಿಗೆ ವಾರ್ಷಿಕ ಕೇವಲ 750 ರೂ.ಗಳ ಪಾವತಿಯೊಂದಿಗೆ ಮಾಲಕ/ಚಾಲಕನಿಗೆ 15 ಲ.ರೂ.ಗಳ ವೈಯಕ್ತಿಕ ಅಪಘಾತ ವಿಮೆಯ ರಕ್ಷಣೆ ದೊರೆಯುತ್ತದೆ. ಈ ಕ್ರಮದಿಂದಾಗಿ ವ್ಯಕ್ತಿ ವಿಮೆ ಮಾಡಿಸಲಾದ ವಾಹನವನ್ನು ಚಲಾಯಿಸುತ್ತಿದ್ದಾಗ ಅಪಘಾತಕ್ಕೊಳಗಾಗಿ ಮೃತಪಟ್ಟರೆ ಆತನ ಕುಟುಂಬಕ್ಕೆ 15 ಲ.ರೂ.ಗಳ ಪರಿಹಾರ ದೊರೆಯುತ್ತದೆ. ಗಾಯಗೊಂಡರೆ ವಿಮಾ ಕಂಪನಿಯು ನಿಮ್ಮ ವೈದ್ಯಕೀಯ ವೆಚ್ಚ ಗಳನ್ನು ಭರಿಸಬೇಕಾಗುತ್ತದೆ. ಹೀಗಾಗಿ ನೀವು ಖುದ್ದು ವಾಹನವನ್ನು ಚಲಾಯಿಸುವಾಗ ಅಪಘಾತದಿಂದ ಗಾಯಗೊಂಡರೆ ಚಿಕಿತ್ಸೆಗಾಗಿ ನೀವು ಹೊಂದಿರಬಹುದಾದ ಆರೊಗ್ಯ ವಿಮೆ ಪಾಲಿಸಿಯ ಬದಲು ನಿಮ್ಮ ವಾಹನದ ವಿಮೆ ಪಾಲಿಸಿಯನ್ನು ಬಳಸಿಕೊಳ್ಳಿ.

ಅಪಘಾತದ ಸಂದರ್ಭಗಳಲ್ಲಿ ಹೆಚ್ಚಿನ ಚಾಲಕರು ವಿಮೆ ಕಂಪನಿಯ ನೆರವು ಪಡೆದುಕೊಳ್ಳುವ ಬದಲು ಅಪಘಾತ ಸ್ಥಳದಲ್ಲಿಯೇ ಒಂದಷ್ಟು ಮೊತ್ತವನ್ನು ಎದುರು ಪಾರ್ಟಿಗೆ ಕೊಟ್ಟು ಇತ್ಯರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಇತ್ಯರ್ಥಗಳಿಗೆ ಒಪ್ಪಿಕೊಳ್ಳಬೇಡಿ. ಬದಲಿಗೆ ತನ್ನ ವಾಹನ ವಿಮೆ ಪಾಲಿಸಿಯ ನಂಬರ್ ನೀಡುವಂತೆ ಅಪಘಾತಕ್ಕೆ ಕಾರಣವಾದ ಚಾಲಕನನ್ನು ಕೇಳಿ ಮತ್ತು ಅವರ ಪಾಲಿಸಿಯಡಿ ಕ್ಲೇಮ್ ಪಡೆದುಕೊಳ್ಳಿ.

ಕ್ಲೇಮ್ ಸೆಟ್ಲಮೆಂಟ್ ಸಂದರ್ಭಗಳಲ್ಲಿ ಕೆಲವು ವೆಚ್ಚಗಳು ಮತ್ತು ನಟ್,ಕೇಬಲ್ ಇತ್ಯಾದಿ ಕನ್ಸೂಮೇಬಲ್‌ಗಳ ವೆಚ್ಚಗಳನ್ನು ಕಡಿತಗೊಳಿಸಲಾಗುತ್ತದೆ ಮತ್ತು ವಾಹನಗಳು ಮಾಲಿಕರು ಅವುಗಳನ್ನು ಖುದ್ದು ಭರಿಸಬೇಕಾಗುತ್ತದೆ. ನೀವು ಕನ್ಸೂಮೇಬಲ್ ಕವರ್‌ನೊಂದಿಗೆ ಪಾಲಿಸಿಯನ್ನು ಖರೀದಿಸಿದರೆ ಕ್ಲೇಮ್ ಸೆಟ್ಲ್‌ಮೆಂಟ್ ಸಂದರ್ಭದಲ್ಲಿ ಅದು ನಿಮ್ಮ ನೆರವಿಗೆ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News