ಕಾಂಗ್ರೆಸ್ ವಿರುದ್ಧ ಮಾಡಿದಾಗ ದೇಶಭಕ್ತ, ಬಿಜೆಪಿ ವಿರುದ್ಧ ಮಾಡಿದಾಗ ಬ್ಲ್ಯಾಕ್ ಮೇಲರ್ !
ಡೆಹ್ರಾಡೂನ್, ನ.10: ಅಕ್ಟೋಬರ್ 28ರಂದು ಹಿಂದಿ ಸುದ್ದಿ ವಾಹಿನಿ ‘ಸಮಾಚಾರ್ ಪ್ಲಸ್’ ಇದರ ಮುಖ್ಯ ಸಂಪಾದಕ ಉಮೇಶ್ ಕುಮಾರ್ ಅವರನ್ನು ಉತ್ತರಾಖಂಡ ಪೊಲೀಸರು ಬಂಧಿಸಿ ತಾವೊಂದು ದೊಡ್ಡ ಸಂಚಿನಿಂದ ರಾಜ್ಯವನ್ನು ರಕ್ಷಿಸಿದ್ದೇವೆ ಎಂದು ಈಗ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಮಾಜಿ ಸಿಎಂ ಹರೀಶ್ ರಾವತ್ ವಿರುದ್ಧದ ಒಂದು ಕುಟುಕು ಕಾರ್ಯಾಚರಣೆಯೂ ಸೇರಿದಂತೆ ತಮ್ಮ ಹಲವು ವಿವಾದಾತ್ಮಕ ಕುಟುಕು ಕಾರ್ಯಾಚರಣೆಗಳಿಗೆ ಪ್ರಸಿದ್ಧಿ ಪಡೆದಿರುವ ಕುಮಾರ್ ಈಗಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಹಿರಿಯ ಅಧಿಕಾರಿಯೊಬ್ಬರ ಸಹಾಯದಿಂದ ಟಾರ್ಗೆಟ್ ಮಾಡಲು ಯೋಜಿಸಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ಆ ಹಿರಿಯ ಅಧಿಕಾರಿ ಪ್ರಸ್ತುತ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಆಗಿದ್ದಾರೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಗಿಂತ ಸ್ವಲ್ಪವೇ ಮುನ್ನ ಆಗಿನ ಸಿಎಂ ಹರೀಶ್ ರಾವತ್ ರನ್ನು ಟಾರ್ಗೆಟ್ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿಯ ಅಚ್ಚುಮೆಚ್ಚಿನವರಾಗಿ ಬಿಟ್ಟಿದ್ದ ಉಮೇಶ್ ಕುಮಾರ್ ಇದೀಗ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಬಂಧನಕ್ಕೊಳಗಾಗಿರುವುದು ವಿಪರ್ಯಾಸವೇ ಸರಿ.
“ಪತ್ರಕರ್ತರೊಬ್ಬರು ಕಾಂಗ್ರೆಸ್ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸಿದರೆ ಆತ ನಿರ್ಭೀತಿಯ ಹಾಗೂ ದೇಶಪ್ರೇಮಿ ಪತ್ರಕರ್ತನಾಗುತ್ತಾನೆ. ಅದೇ ವ್ಯಕ್ತಿ ಬಿಜೆಪಿ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸಿದಾಗ ಆತ `ಭ್ರಷ್ಟ ಮತ್ತು ದೇಶದ್ರೋಹಿ' ಎಂದೆನಿಸಿಕೊಳ್ಳುತ್ತಾನೆ,'' ಎಂದು ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಪ್ರೀತಂ ಸಿಂಗ್ ಹೇಳಿದ್ದಾರೆ.
ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದ ನಂತರ ಆಗಿನ ಸಿಎಂ ರಾವತ್ ಕೆಲ ಪಕ್ಷ ಸದಸ್ಯರಿಗೆ ಲಂಚ ನೀಡುತ್ತಿರುವುದನ್ನು ತೋರಿಸುವ ಕುಟುಕು ಕಾರ್ಯಾಚರಣೆಯನ್ನು ಕುಮಾರ್ ಈ ಹಿಂದೆ ನಡೆಸಿದ್ದರು. ಸದನದಲ್ಲಿ ವಿಶ್ವಾಸಮತ ಯಾಚನೆ ಮುನ್ನ ಇದು ವೈರಲ್ ಆಗಿತ್ತು. ರಾವತ್ ಅವರು ವಿಶ್ವಾಸಮತ ಗೆದ್ದರೂ ನಂತರದ ಚುನಾವಣೆಯಲ್ಲಿ ಸೋತಿದ್ದರು. ಹಿಂದೆ ಕಾಂಗ್ರೆಸ್ ಕೂಡ ಇದೇ ಪತ್ರಕರ್ತನ 2010ರ ಹೈಡ್ರೋ ಹಗರಣ ಕುರಿತಾದ ಕುಟುಕು ಕಾರ್ಯಾಚರಣೆಯನ್ನು ಪ್ರಶಂಸಿಸಿತ್ತು. ಆಗ ಬಿಜೆಪಿಯ ರಮೇಶ್ ಪೊಖ್ರಿಯಾಲ್ ಸರಕಾರವಿತ್ತು.
ದಿಲ್ಲಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದ ಕುಮಾರ್ 2002ರಲ್ಲಿ ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು. ಆಗಿನ ಉತ್ತರಾಖಂಡ ಸಿಎಂ ಅವರ ಪೋಷಕನಾಗಿ ಅವರಿಗೆ ಮಾರ್ಗದರ್ಶನ ನೀಡಿದ್ದರೆಂದು ಕುಮಾರ್ ಅವರ ವೆಬ್ ಪುಟದಲ್ಲಿನ ಅವರ ಪರಿಚಯದಲ್ಲಿ ವಿವರಿಸಲಾಗಿದೆ.
2012ರಲ್ಲಿ ಅವರು ತಮ್ಮದೇ ಸುದ್ದಿ ವಾಹಿನಿ ಸಮಾಚಾರ್ ಪ್ಲಸ್ ಆರಂಭಿಸಿದ್ದರಲ್ಲದೆ ಇದು ಉತ್ತರಾಖಂಡ ಮಾತ್ರವಲ್ಲದೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಢವನ್ನೂ ತಲುಪುತ್ತಿತ್ತು. ವೈ ಕೆಟಗರಿ ಭದ್ರತೆ ಪಡೆಯುತ್ತಿದ್ದ ಉತ್ತರಾಖಂಡದ ಏಕೈಕ ಸಂಪಾದಕರು ಅವರಾಗಿದ್ದರು. ತಮಗೆ ರಾಜಕೀಯ ನಂಟಿಲ್ಲ ಹಾಗೂ ಎಲ್ಲಾ ಸಿಎಂಗಳ ಜತೆ ಉತ್ತಮ ಸಂಬಂಧ ಹೊಂದಿದ್ದಾಗಿ ಅವರು ಹೇಳಿದ್ದರು.
ಆದರೆ ಇದಕ್ಕೆ ಅಪವಾದವೆಂಬಂತೆ 2009-2010ರಲ್ಲಿ ಬಿಜೆಪಿಯ ನಿಶಾಂಕ್ ಸಿಎಂ ಆಗಿದ್ದಾಗ ಹಲವಾರು ವಂಚನೆ ಪ್ರಕರಣಗಳು ಕುಮಾರ್ ವಿರುದ್ಧ ದಾಖಲಾಗಿತ್ತು. ಆದರೆ ನಂತರದ ಸರಕಾರಗಳು ಈ ಪ್ರಕರಣಗಳನ್ನು ವಾಪಸ್ ಪಡೆದಿದ್ದವು.
ಆದರೆ ಕುಮಾರ್ ಅವರ ಉದ್ಯೋಗಿಗಳಲ್ಲೊಬ್ಬರಾಗಿದ್ದ ಆಯುಷ್ ಗೌಡ್ ಎಂಬವರು ದೂರು ದಾಖಲಿಸಿದ ಎರಡು ತಿಂಗಳುಗಳ ನಂತರ ಅಕ್ಟೋಬರ್‍ನಲ್ಲಿ ಅವರ ಬಂಧನವಾಗಿತ್ತು. ಉದ್ಯೋಗಿಗಳಿಂದ ಬಲವಂತವಾಗಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕುಟುಕು ಕಾರ್ಯಾಚರಣೆ ನಡೆಸುತ್ತಿದ್ದರೆಂದು ಹಾಗೂ ಅವುಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಆತ ಡೆಹ್ರಾಡೂನ್‍ನ ರಾಜಪುರ್ ಠಾಣೆಯಲ್ಲಿ ಆಗಸ್ಟ್ 10ರಂದು ದಾಖಲಿಸಿದ್ದ ದೂರಿನಲ್ಲಿ ಆಪಾದಿಸಲಾಗಿತ್ತು.
ತನ್ನ ದೂರಿನಲ್ಲ ಆತ ಸಮಾಚಾರ್ ಪ್ಲಸ್ ಉದ್ಯೋಗಿಗಳಾದ ಪ್ರವೀಣ್ ಸಾಹ್ನಿ, ಸೌರವ್ ಸಾಹ್ನಿ ಹಾಗು ರಾಹುಲ್ ಭಾಟಿಯಾ ಮತ್ತು ಉತ್ತರಾಖಂಡ್ ಆರ್ಯುವೇದ ವಿವಿಯ ಮಾಜಿ ರಿಜಿಸ್ಟ್ರಾರ್ ಮೃತ್ಯುಂಜಯ್ ಮಿಶ್ರಾ ಅವರನ್ನೂ ದೂರಿದ್ದರು. ಅಕ್ಡೋಬರ್ 28ರಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರು ಕುಮಾರ್ ಅವರ ಗಾಝಿಯಾಬಾದ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ನಿವಾಸದಿಂದ ರೂ 39 ಲಕ್ಷ ನಗದು, ವಿದೇಶ ಕರೆನ್ಸಿ, ಕುಟುಕು ಕಾರ್ಯಾಚರಣೆ ನಡೆಸುವ ಸಾಧನಗಳು, ಹಲವಾರು ಹಾರ್ಡ್ ಡ್ರೈವ್ ಮತ್ತು ಸೀಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತೆಂದು ಎಸ್‍ಪಿ ನಿವೇದಿತಾ ಕುಕ್ರೆತಿ ತಿಳಿಸಿದ್ದರು.
ತರುವಾಯ ಪ್ರವೀಣ್ ಸಾಹ್ನಿ, ರಾಹುಲ್ ಭಾಟಿಯಾ ಮತ್ತು ಸೌರಭ್ ಬಂಧನಕ್ಕೆ ತಡೆ ಹೇರಿದ ಹೈಕೋರ್ಟ್ ಸರಕಾರ ಮಾಧ್ಯಮವನ್ನು ಹತ್ತಿಕ್ಕಲು ಹಾಗೂ ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿತ್ತಲ್ಲದೆ ಕುಟುಕು ಕಾರ್ಯಾಚರಣೆಗಳನ್ನು ನಿಷೇಧಿಸಲು ಸಾಧ್ಯವಿಲ್ಲವೆಂದಿತ್ತು.
ಉತ್ತರಾಖಂಡ ಪೊಲೀಸರು ಕುಮಾರ್ ಕಸ್ಟಡಿ ಕೇಳಿದ್ದರೂ ಅದನ್ನು ನ್ಯಾಯಾಲಯ ಇನ್ನೂ ನೀಡಿಲ್ಲ, ತರುವಾಯ ಕುಮಾರ್ ವಿರುದ್ಧ ಎಲ್ಲಾ ಹಳೆ ಪ್ರಕರಣಗಳನ್ನು ಮತ್ತೆ ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.
“ಮಹಾನ್ ಪತ್ರಕರ್ತ, ತಮ್ಮ ನಿರ್ಭೀತಿಯ ಕುಟುಕು ಕಾರ್ಯಾಚರಣೆಗಳಿಂದಾಗಿ ಸುಳ್ಳು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ” ಎಂದು ಒಮ್ಮೆ ಕುಮಾರ್ ಬೆಂಬಲಿಸಿ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಅಜಯ್ ಭಟ್ಟ್ ಬರೆದಿದ್ದರು. ತಾವು ಈ ಪತ್ರ ಬರೆದಿದ್ದು ನಿಜವಾಗಿದ್ದರೂ ಕುಮಾರ್ ಜತೆ ಯಾವುದೇ ವೈಯಕ್ತಿಕ ನಂಟು ಇಲ್ಲ ಎನ್ನುತ್ತಾರೆ ಅವರು. ``ನನ್ನ ಬಳಿ ನೂರಾರು ಜನ ಬರುತ್ತಾರೆ. ಅವರೂ ಬಂದಿರಬಹುದು ಹಾಗೂ ನಾನು ಪತ್ರ ಬರೆದಿರಬಹುದು ಆದರೆ ಆತ ನನ್ನ ಸ್ನೇಹಿತರೆಂದು ಅದರರ್ಥವಲ್ಲ'' ಎಂದು ಅವರು ಹೇಳುತ್ತಾರೆ.
ಕೃಪೆ: thewire.in