×
Ad

ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಬುದ್ಧನ ಪ್ರತಿಮೆ ಸ್ಥಾಪನೆಯಾಗಲಿ: ಬಿಜೆಪಿಯ ಸಂಸದೆ

Update: 2018-11-10 19:15 IST

ಗೊಂಡಾ(ಉ.ಪ್ರ),ನ.10: ಬಲಪಂಥೀಯ ಸಂಘಟನೆಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚುತ್ತಿರುವ ಆಗ್ರಹಗಳ ನಡುವೆಯೇ ಬಹರಾಯಿಚ್‌ನ ಬಿಜೆಪಿ ಸಂಸದೆ ಹಾಗೂ ದಲಿತ ನಾಯಕಿ ಸಾವಿತ್ರಿಬಾಯಿ ಫುಲೆ ಅವರು ಅಯೋಧ್ಯೆಯ ವಿವಾದಿತ ತಾಣದಲ್ಲಿ ಬುದ್ಧನ ಪ್ರತಿಮೆಯ ಸ್ಥಾಪನೆಗೆ ಕರೆ ನೀಡಿದ್ದಾರೆ.

ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಅಯೋಧ್ಯೆಯ ವಿವಾದಿತ ತಾಣದಲ್ಲಿ ನಡೆಸಲಾದ ಉತ್ಖನನದಲ್ಲಿ ಬುದ್ಧನಿಗೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿದ್ದವು. ಭಾರತ ಬುದ್ಧನಿಗೆ ಸೇರಿದ್ದು ಮತ್ತು ಅಯೋಧ್ಯೆ ಬುದ್ಧನ ಸ್ಥಳವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಲು ತಾನು ಬಯಸಿದ್ದೇನೆ. ಹೀಗಾಗಿ ಆ ತಾಣದಲ್ಲಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಫುಲೆ ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಕೇಶ ಸಿನ್ಹಾ ಅವರು ಖಾಸಗಿ ಮಸೂದೆಯೊಂದನ್ನು ಮಂಡಿಸಲಿದ್ದಾರೆ ಎಂಬ ವರದಿಯ ಕುರಿತು ಪ್ರಶ್ನೆಗೆ ಅವರು,ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಸಂವಿಧಾನವು ಎಲ್ಲ ಧರ್ಮಗಳಿಗೆ ಭದ್ರತೆಯ ಸಮಾನ ಹಕ್ಕುಗಳನ್ನು ನೀಡಿದೆ. ಸಂವಿಧಾನಕ್ಕೆ ಅನುಗುಣವಾಗಿ ದೇಶವನ್ನು ನಡೆಸಬೇಕು ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News