ನವೆಂಬರ್‌ನ ಹಿಮಪಾತ ‘ವಿಶೇಷ ನೈಸರ್ಗಿಕ ವಿಪತ್ತು’: ಜಮ್ಮು ಕಾಶ್ಮೀರ ಸರಕಾರದ ಘೋಷಣೆ
ಶ್ರೀನಗರ, ನ.10: ಜಮ್ಮು ಕಾಶ್ಮೀರದಲ್ಲಿ ಈ ವಾರದ ಆರಂಭದಲ್ಲಿ ಆಗಿರುವ ಭಾರೀ ಹಿಮಪಾತವನ್ನು ವಿಶೇಷ ನೈಸರ್ಗಿಕ ವಿಪತ್ತು ಎಂದು ರಾಜ್ಯ ಸರಕಾರ ಘೋಷಿಸಿದೆ. ಇದರೊಂದಿಗೆ ಈ ಅನಿರೀಕ್ಷಿತ ವಿದ್ಯಮಾನದಿಂದ ಬಾಧಿತ ರೈತರಿಗೆ ಪರಿಹಾರ ಮತ್ತು ನೆರವು ಒದಗಿಸಲು ದಾರಿ ಸುಗಮವಾಗಿದೆ.
ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಬಿವಿಆರ್ ಸುಬ್ರಮಣ್ಯಂ ಅವರು ನವೆಂಬರ್ 3 ಮತ್ತು 4ರಂದು ಕಾಶ್ಮೀರ ವಿಭಾಗದಲ್ಲಿ ಉಂಟಾಗಿದ್ದ ಭಾರೀ ಹಿಮಪಾತದಿಂದ ಆಗಿರುವ ವ್ಯಾಪಕ ಹಾನಿಯ ಪರಿಶೀಲನೆ ನಡೆಸಿದರು ಮತ್ತು ಇದು ರಾಜ್ಯದಲ್ಲಿ ನಡೆದ ವಿಶೇಷ ನೈಸರ್ಗಿಕ ವಿಪತ್ತು ಎಂದು ಘೋಷಿಸಲು ಅನುಮೋದನೆ ನೀಡಿದರು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಸುಮಾರು 53 ಸಾವಿರ ಹೆಕ್ಟೇರ್‌ಗಳಷ್ಟು ತೋಟಗಾರಿಕಾ ಬೆಳೆ ಹಾಗೂ 9 ಸಾವಿರ ಹೆಕ್ಟೇರ್‌ಗಳಷ್ಟು ಕೃಷಿ ಬೆಳೆ ನಾಶವಾಗಿದ್ದು 500 ಕೋಟಿ ರೂ.ಗೂ ಅಧಿಕ ನಷ್ಟವಾಗಿರುವುದಾಗಿ ಪ್ರಾಥಮಿಕ ಪರಿಶೀಲನೆಯಲ್ಲಿ ಅಂದಾಜು ಮಾಡಲಾಗಿದೆ ಎಂದು ಸುಬ್ರಮಣ್ಯಂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಯಕಾರಿ ಸಮಿತಿ ದೀರ್ಘಕಾಲಿಕ ಬೆಳೆಗಳಿಗೆ ಪರಿಹಾರ ಮೊತ್ತವನ್ನು ಹೆಕ್ಟೇರ್‌ಗೆ 36 ಸಾವಿರಕ್ಕೆ( ಈ ಹಿಂದೆ 18 ಸಾವಿರವಿತ್ತು) ಹೆಚ್ಚಿಸಿತ್ತಲ್ಲದೆ, ಸೇಬನ್ನೂ ದೀರ್ಘಕಾಲಿಕ ಬೆಳೆ ಎಂದು ಪರಿಗಣಿಸುವುದಾಗಿ ತಿಳಿಸಿತ್ತು.
ಒಂದು ಹೆಕ್ಟೇರ್‌ಗಿಂತ ಕಡಿಮೆ ಜಮೀನನ್ನು ಹೊಂದಿರುವ ರೈತರಿಗೆ ಪ್ರತೀ ಕುಟುಂಬಕ್ಕೆ ಗರಿಷ್ಟ 4 ಸಾವಿರ ರೂ. ಪರಿಹಾರ ಧನ ನೀಡಲಾಗುವುದು ಹಾಗೂ ಬಿತ್ತನೆ ಮಾಡಿದ ಮತ್ತು ನೆಟ್ಟ ಜಮೀನಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ತಕ್ಷಣದ ಪರಿಹಾರ ವಿತರಣೆಗಾಗಿ 10 ಕೋಟಿ ರೂ.ಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕವಾಗಿ ತೆಗೆದಿರಿಸುವಂತೆ ಸೂಚಿಸಿದ್ದಾರೆ.