ಬಜರಂಗ್ ಪೂನಿಯಾ ವಿಶ್ವದ ನಂ.1 ಕುಸ್ತಿಪಟು

Update: 2018-11-10 16:41 GMT

ಹೊಸದಿಲ್ಲಿ, ನ.10: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಶನಿವಾರ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರಿದ್ದು 65 ಕೆಜಿ ತೂಕ ವಿಭಾಗದಲ್ಲಿ ವಿಶ್ವದ ನಂ.1 ಪೈಲ್ವಾನ್ ಆಗಿ ಹೊರಹೊಮ್ಮಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಸಹಿತ ಈ ಋತುವಿನಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿರುವ 24ರ ಹರೆಯದ ಬಜರಂಗ್ ಯುಡಬ್ಲುಡಬ್ಲು ಪಟ್ಟಿಯಲ್ಲಿ 96 ಅಂಕದೊಂದಿಗೆ ನಂ.1 ರ್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ.

ಈ ಋತು ಬಜರಂಗ್‌ಗೆ ಅದೃಷ್ಟದಾಯಕವಾಗಿ ಪರಿಣಮಿಸಿದ್ದು ಬುಡಾಪೆಸ್ಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಯಾಂಕ ಪಡೆದಿರುವ ಭಾರತದ ಏಕೈಕ ಕುಸ್ತಿಪಟು ಎನಿಸಿಕೊಂಡಿದ್ದರು.

 ರ್ಯಾಂಕಿಂಗ್ ಪಟ್ಟಿಯಲ್ಲಿ ಬಜರಂಗ್ ನಂ.1 ಸ್ಥಾನದಲ್ಲಿದ್ದರೆ, ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವ್ಲಾಡೆಸ್ 66 ಅಂಕಗಳೊಂದಿಗೆ ಎರಡನೇ ಸ್ಥಾನ, ರಶ್ಯದ ಅಕ್ಮಹದ್ ಚಕೆವ್(62)ಮೂರನೇ ಹಾಗೂ ನೂತನ ವಿಶ್ವ ಚಾಂಪಿಯನ್ ಟಕುಟೊ ಒಟೊಗುರೊ(56) ನಾಲ್ಕನೇ ಸ್ಥಾನ ಪಡೆದಿದ್ದಾರೆ.

 ಬಜರಂಗ್ ಅಗ್ರ-10ರಲ್ಲಿರುವ ಭಾರತದ ಏಕೈಕ ಪುರುಷ ಕುಸ್ತಿಪಟು. ಭಾರತದ ಐವರು ಮಹಿಳಾ ಕುಸ್ತಿಪಟುಗಳು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ನಾಲ್ಕನೇ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ಪೂಜಾ ಧಾಂಡಾ ಮಹಿಳೆಯರ 57 ಕೆಜಿ ತೂಕ ವಿಭಾಗದಲ್ಲಿ 52 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ರಿತು ಫೋಗಟ್(ಮಹಿಳೆಯರ 50 ಕೆಜಿ)33 ಅಂಕಗಳೊಂದಿಗೆ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಸರಿತಾ ಮೋರ್(59ಕೆಜಿ)7ನೇ ಸ್ಥಾನ ಪಡೆದಿದ್ದರೆ, ನವಜೋತ್ ಕೌರ್(32) ಹಾಗೂ ಕಿರಣ್(37)ಕ್ರಮವಾಗಿ 68 ಕೆಜಿ ಹಾಗೂ 76 ಕೆಜಿ ವಿಭಾಗದಲ್ಲಿ 9ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News