ಲೋಕಸಭೆ ಟಿಕೆಟ್‌ಗೆ ಮಾಯಾವತಿ 5 ಕೋಟಿ ರೂ ಕೇಳಿದ್ದರು: ಉಚ್ಛಾಟಿತ ಬಿಎಸ್ಪಿ ಮುಖಂಡನ ಆರೋಪ

Update: 2018-11-10 17:57 GMT

ಲಕ್ನೊ, ನ.10: 5 ಕೋಟಿ ರೂ. ಕೊಟ್ಟರೆ ಲೋಕಸಭೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್‌ ನೀಡುವುದಾಗಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದರು ಎಂದು ಉಚ್ಛಾಟಿತ ಬಿಎಸ್ಪಿ ಮುಖಂಡ ಮುಕುಲ್ ಉಪಾಧ್ಯಾಯ ಆರೋಪಿಸಿದ್ದಾರೆ.

   ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮುಕುಲ್‌ರನ್ನು ಶುಕ್ರವಾರ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ತಾನು 2019ರ ಲೋಕಸಭಾ ಚುನಾವಣೆಯಲ್ಲಿ ಆಲಿಗಢ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೇಟು ಬೇಕಿದ್ದರೆ 5 ಕೋಟಿ ರೂ. ನೀಡಬೇಕು ಎಂದು ಮಾಯಾವತಿ ಹೇಳಿದ್ದರು ಎಂದು ಮುಕುಲ್ ಆರೋಪಿಸಿದ್ದಾರೆ. ತನ್ನ ಸಹೋದರ ರಾಮ್‌ವೀರ್ ಪತ್ನಿ ಸೀಮಾ ಕೂಡಾ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ರಾಮ್‌ವೀರ್ 5 ಕೋಟಿ ರೂ. ಕೊಡಲು ಒಪ್ಪಿದ ಹಿನ್ನೆಲೆಯಲ್ಲಿ ಸೀಮಾಗೆ ಟಿಕೇಟು ನೀಡುವುದಾಗಿ ನಿರ್ಧರಿಸಲಾಗಿದೆ. ರಾಜಕೀಯದಲ್ಲಿ ತನ್ನ ಏಳಿಗೆಯನ್ನು ಸಹಿಸದ ಸಹೋದರ ಮತ್ತು ಅತ್ತಿಗೆ ತನ್ನ ವಿರುದ್ಧ ಒಳಸಂಚು ನಡೆಸಿದ್ದಾರೆ ಎಂದು ಮುಕುಲ್ ದೂರಿದ್ದಾರೆ.

 ಆದರೆ ಮುಕುಲ್ ಬಿಜೆಪಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಬಿಎಸ್ಪಿ ಟಿಕೇಟು ದೊರಕದಿದ್ದರೆ ಬಿಜೆಪಿಗೆ ಸೇರಲು ನಿರ್ಧರಿಸಿದ್ದರು. ಈ ಮಾಹಿತಿ ಪಡೆದ ಪಕ್ಷದ ವರಿಷ್ಠರು ಮುಕುಲ್‌ರನ್ನು ಉಚ್ಚಾಟಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News