‘ಹೈಜಾಕ್ ಬಟನ್’ ಒತ್ತಿದ ಪೈಲೆಟ್: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಆತಂಕ

Update: 2018-11-10 16:57 GMT

ಹೊಸದಿಲ್ಲಿ, ನ. 10: ಕಂದಹಾರ್‌ಗೆ ತೆರಳಬೇಕಿದ್ದ ವಿಮಾನ ರನ್‌ವೇಯಲ್ಲಿ ಸಂಚರಿಸುತ್ತಿದ್ದಾಗ ಪೈಲಟ್ ತಪ್ಪಾಗಿ ‘ಹೈಜಾಕ್ ಬಟನ್’ ಒತ್ತಿದ ಹಿನ್ನೆಲೆಯಲ್ಲಿ ‘ಅಪಹರಣ ಎಚ್ಚರಿಕೆ’ ಸಂದೇಶ ರವಾನೆಯಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

9 ಸಿಬ್ಬಂದಿ ಹಾಗೂ 124 ಪ್ರಯಾಣಿಕರು ಹಾಗೂ ಒಂದು ಶಿಶು ಇದ್ದ ಅರಿಯಾನ ಅಫಘಾನ್ ಏರ್‌ಲೈನ್ಸ್‌ನ ವಿಮಾನವನ್ನು ಅನಂತರ ಭದ್ರತಾ ಪರಿಶೀಲನೆ ನಡೆಸಿ ಎರಡು ಗಂಟೆಗಳ ಬಳಿಕ ಹಾರಾಟ ಮುಂದುರಿಸಲು ಅವಕಾಶ ನೀಡಲಾಯಿತು. ‘ಹೈಜಾಕ್ ಬಟನ್’ ಒತ್ತಿರುವುದು ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪಡೆ ಹಾಗೂ ಭಾರತೀಯ ಭದ್ರತಾ ಪಡೆ ಸಹಿತ ಸಂಬಂಧಿತ ಹಲವು ಭದ್ರತಾ ಸಂಸ್ಥೆಗಳು ಕಾರ್ಯಾಚರಣೆಗೆ ಇಳಿಯಲು ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಎಸ್‌ಜಿ ಕಮಾಂಡೊ ಹಾಗೂ ಇತರ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಕೂಡಲೇ ಪ್ರತಿಕ್ರಿಯಿಸಿದರು ಹಾಗೂ ವಿಮಾನವನ್ನು ಸುತ್ತುವರಿದರು ಎಂದು ಅವರು ತಿಳಿಸಿದ್ದಾರೆ.

ದಿಲ್ಲಿ-ಕಂದಹಾರ್ ಎಫ್‌ಜಿ12 ವಿಮಾನ ಸಂಜೆ 3.30ಕ್ಕೆ ಹಿಂದಿರುಗಬೇಕಿತ್ತು. ಹಾರಾಟ ಆರಂಭಿಸುತ್ತಿದ್ದಂತೆ ಸಿಬ್ಬಂದಿಯೋರ್ವರು ‘ಹೈಜಾಕ್ ಬಟನ್’ ಒತ್ತಿದ ಕಾರಣಕ್ಕೆ ವಿಮಾನ ‘ಐಸೋಲೇಶನ್ ಬೇ’ಗೆ ಹಿಂದಿರುಗಿತ್ತು ಎಂದು ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೊದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಪ್ಟನ್‌ನಿಂದ ಪ್ರಮಾದ ಸಂಭವಿಸಿದೆ ಎಂಬುದು ದೃಢಪಟ್ಟ ಬಳಿಕ ವಿಮಾನಕ್ಕೆ ಹಾರಾಟ ಮುಂದುವರಿಸಲು ಅನುಮತಿ ನೀಡಲಾಯಿತು. ವಿಮಾನ ಹಾರಾಟ ಆರಂಭಿಸುವ ಮುನ್ನ ಎರಡನೇ ಬಾರಿ ಭದ್ರತಾ ಪರಿಶೀಲನೆ ನಡೆಸಲಾಯಿತು ಹಾಗೂ ಎಲ್ಲ ಪ್ರಯಾಣಿಕರ ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News