ಚೀನಾದಲ್ಲಿ 150 ಕೋ. ರೂ. ಬಾಚಿದ ಹಿಚ್ ಕಿ

Update: 2018-11-11 02:49 GMT

ಚೀನಾದಲ್ಲಿ ಭಾರತೀಯ ಚಿತ್ರಗಳು ಜನಪ್ರಿಯ ಎಂಬುದು ನನಗೆ ತಿಳಿದಿತ್ತು. ಆದರೆ, ‘ಹಿಚ್‌ಕಿ’ ಚಿತ್ರದ ಪ್ರಚಾರ ಕ್ಕಾಗಿ ಚೀನಾಕ್ಕೆ ತೆರಳಿದ್ದಾಗ ಬಾಲಿವುಡ್ ನಟ- ನಟಿಯರ ಬಗ್ಗೆ ಅವರು ತೋರಿಸುತ್ತಿದ್ದ ಗೌರವ, ಪ್ರೀತಿ ನೋಡಿ ಅಚ್ಚರಿ ಆಯಿತು ಎಂದು ರಾಣಿ ಮುಖರ್ಜಿ ಹೇಳಿದ್ದಾರೆ. ಈ ಚಿತ್ರದಲ್ಲಿ ನರಗಳಿಗೆ ಸಂಬಂಧಿಸಿದ ಉಗ್ಗುವಿಕೆಯ ಕಾಯಿಲೆಯಿಂದ ನರಳುತ್ತಿರುವ ಅಧ್ಯಾಪಕಿಯ ಪಾತ್ರವನ್ನು ರಾಣಿ ಮುಖರ್ಜಿ ನಿರ್ವಹಿಸಿದ್ದಾರೆ. ಚಿತ್ರ ಈ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಚೀನಾದಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ. ಚಿತ್ರದ ಬಗ್ಗೆ ಪ್ರಚಾರ ಮಾಡಲು ರಾಣಿ ಮುಖರ್ಜಿ ಈಗ ಚೀನಾದ ಹಲವು ನಗರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಚಿತ್ರ ಚೀನಾ ಬಾಕ್ಸ್ ಆಫೀಸಿನಲ್ಲಿ 150 ಕೋ. ರೂ. ಬಾಚಿಕೊಂಡಿದೆ. ‘‘ಈ ಚಿತ್ರದ ಪ್ರತಿಯೊಂದು ಭಾವನೆಯೂ ಅವರಿಗೆ ಅರ್ಥ ಆಗಿದೆ. ಅವರು ಚಿತ್ರ ನೋಡಿದ್ದರು. ಆದುದರಿಂದ ನಾನು ಹೋದಲ್ಲೆಲ್ಲ ಚಿತ್ರದ ಬಗ್ಗೆ ಸಕಾರಾತ್ಮಕತೆ ಕಂಡು ಬಂತು. ಭಾರತೀಯ ಚಿತ್ರಗಳು ಚೀನಾದಲ್ಲಿ ಜನಪ್ರಿಯ ಎಂದು ನನಗೆ ಗೊತ್ತು. ಆದರೆ, ಇಷ್ಟೊಂದು ಜನಪ್ರಿಯವಾಗಿವೆ ಎಂಬುದು ನನಗೆ ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು’’ ಎಂದು ರಾಣಿ ಮುಖರ್ಜಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಂಪೂರ್ಣ ಪ್ರಯಾಣದಲ್ಲಿ ಪ್ರೇಕ್ಷಕರು ಹಾಗೂ ಚೀನಾ ಜನರೊಂದಿಗೆ ನಡೆಸಿದ ಸಂವಾದ ನನ್ನನ್ನು ಇನ್ನಷ್ಟು ಉತ್ತೇಜಿಸಿತು. ಇದೇ ಸಂದರ್ಭ ಭಾರತೀಯ ನಟ-ನಟಿಯರಿಗೆ ಅವರು ನೀಡುತ್ತಿರುವ ಗೌರವ, ಪ್ರೀತಿ ನನಗೆ ಅಚ್ಚರಿ ಉಂಟು ಮಾಡಿತು ಎಂದು ಅವರು ಹೇಳಿದ್ದಾರೆ. ‘‘ಹಿಚ್‌ಕಿ ವಿಶೇಷ ಚಿತ್ರ. ಯಾಕೆಂದರೆ, ನಾನು ಮಗುವಿಗೆ ಜನ್ಮ ನೀಡಿದ ಬಳಿಕ ನಟಿಸುತ್ತಿರುವ ಮೊದಲ ಚಿತ್ರ. ತಾಯಿಯಾದ ಬಳಿಕ ನಟಿಸುತ್ತಿರುವ ಮೊದಲ ಚಿತ್ರವಾದುದರಿಂದ ತುಂಬಾ ಸಂಕಷ್ಟ ಎದುರಿಸಬೇಕಾಯಿತು. ನಾನು ನನ್ನ ಮಗಳನ್ನು ಬಿಟ್ಟು ಶೂಟಿಂಗ್‌ಗೆ ತೆರಳಲು ತುಂಬಾ ಕಷ್ಟಪಟ್ಟೆ. ಆದರೆ, ಎಲ್ಲವೂ ಸುಸೂತ್ರವಾಗಿ ನೆರವೇರಿತು.’’ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News