ವಿವಾದದ ಸುಳಿಯಲ್ಲಿ ಸರ್ಕಾರ್

Update: 2018-11-11 02:50 GMT

ಹಲವು ಅಡ್ಡಿ ಆತಂಕಗಳ ಬಳಿಕ ವಿಜಯ್ ನಟನೆಯ‘ಸರ್ಕಾರ್’ ಚಿತ್ರ ಕೊನೆಗೂ ದೀಪಾವಳಿ ದಿನ ಬಿಡು ಗಡೆಯಾಗಿದೆ. ಮೊದಲ ದಿನವೇ ಚಿತ್ರ ತಮಿಳುನಾಡಿನಲ್ಲಿ ತುಂಬಿದ ಗೃಹಗಳಿಂದ ಪ್ರದರ್ಶಿತವಾಗಿದೆ. ರಾಜಕೀಯ ವಸ್ತುವಾಗುಳ್ಳ ಈ ಚಿತ್ರಕ್ಕೆ ವಿಜಯ್ ಅಭಿಮಾನಿಗಳು ಜೈ ಎಂದಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚಿತ್ರ ವಿಮರ್ಶೆಗೆ ಒಳಪಡಿಸಿದೆ. ಯಾವುದೇ ಪಕ್ಷಗಳ ಹೆಸರು ಹೇಳದೆ ತಮಿಳು ನಾಡಿನ ರಾಜಕೀಯ ಪಕ್ಷಗಳ ಕಾರ್ಯ ನಿರ್ವಹಣೆಯನ್ನು ಚಿತ್ರ ಒರೆಗೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಕಡಂಬೂರ್ ರಾಜು, ‘ಸರ್ಕಾರ್’ ಚಿತ್ರದಲ್ಲಿರುವ ಕೆಲವು ದೃಶ್ಯಗಳನ್ನು ಕತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ತಮಿಳುನಾಡು ಸರಕಾರ ಉಚಿತವಾಗಿ ನೀಡಿದ ಗೃಹೋಪಯೋಗಿ ವಸ್ತುಗಳನ್ನು ಜನರು ಬೆಂಕಿಗೆ ಎಸೆಯುತ್ತಿರುವುದನ್ನು ತೋರಿಸುವ ‘ಸರ್ಕಾರ್’ನ ದೃಶ್ಯವನ್ನು ತೆಗೆಯಬೇಕು. ಇಲ್ಲದೇ ಇದ್ದರೆ, ತಮಿಳು ನಾಡು ಸರಕಾರ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ವಿಜಯ್ ಚಿತ್ರ ರಾಜಕೀಯ ಒತ್ತಡ ಎದುರಿಸುತ್ತಿರುವುದು ಇದೇ ಮೊದಲಲ್ಲ. ಅಟ್ಲೀ ನಿರ್ದೇಶನದ ಈ ಹಿಂದಿನ ಅವರ ‘ಮರ್ಸೆಲ್’ ಚಿತ್ರ ಬಿಜೆಪಿಯಿಂದ ತೀವ್ರ ವಿರೋಧ ಎದುರಿಸಿತ್ತು. ಬಿಜೆಪಿಯನ್ನು ಕೆಟ್ಟದಾಗಿ ಬಿಂಬಿಸಲಾಗಿತ್ತು ಎಂದು ಆರೋಪಕ್ಕೆ ಒಳಗಾಗಿತ್ತು. ನೋಟು ನಿಷೇಧ, ಜಿಎಸ್‌ಟಿ ಹಾಗೂ ಡಿಜಿಟಲ್ ಇಂಡಿಯಾ ಕುರಿತು ಚಿತ್ರದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಬಿಜೆಪಿಯ ತಮಿಳುನಾಡಿನ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೂ ಈ ಚಿತ್ರ ಬಾಕ್ಸ್ ಆಫೀಸ್ ಧೂಳೀಪಟ ಮಾಡಿತ್ತು. ‘ಸರ್ಕಾರ್’ ತಂಡ ಹೇಗೆ ಪ್ರತಿಕ್ರಿಯಿಸಲಿದೆ ಎಂಬ ಕುತೂಹಲ ದಲ್ಲಿ ನಾನಿದ್ದೇನೆ ಎಂದು ಸಚಿವ ಕಡಂಬೂರ್ ರಾಜು ಹೇಳಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಸರ್ಕಾರ್ ಚಿತ್ರದ ತಾರಾಗಣದಲ್ಲಿ ಕೀರ್ತಿ ಸುರೇಶ್, ವರಲಕ್ಷ್ಮೀ, ಶರತ್ ಕುಮಾರ್, ಯೋಗಿ ಬಾಬು ಹಾಗೂ ರಾಧಾರವಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News