ಈ ವಿಷಯ ಗೊತ್ತಾದರೆ ನೀವು ಖಂಡಿತ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವುದಿಲ್ಲ

Update: 2018-11-11 10:58 GMT

ಬಾಳೆಹಣ್ಣು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು ಬಾಳೆಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಎಸೆದುಬಿಡುತ್ತೇವೆ. ಸಿಪ್ಪೆಯೂ ಕೂಡ ಹಣ್ಣಿನಷ್ಟೇ ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಶಿಲೀಂಧ್ರ ನಿಗ್ರಹ ಸಂಯುಕ್ತಗಳು,ಆ್ಯಂಟಿ ಬಯಾಟಿಕ್‌ಗಳು ಮತ್ತು ನಾರು ಸಮೃದ್ಧವಾಗಿರುತ್ತವೆ,ಜೊತೆಗೆ ಇತರ ಆರೋಗ್ಯವರ್ಧಕ ಗುಣಗಳನ್ನೂ ಹೊಂದಿರುತ್ತದೆ.ನೀವು ತಿಳಿದಿರಲೇಬೇಕಾದ ಬಾಳೆಹಣ್ಣಿನ ಕೆಲವು ಆರೋಗ್ಯಲಾಭಗಳ ಕುರಿತ ಮಾಹಿತಿಯಿಲ್ಲಿದೆ.

► ಖಿನ್ನತೆಯನ್ನು ನಿವಾರಿಸುತ್ತದೆ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಸಿರೊಟೋನಿನ್ ಎಂಬ ರಾಸಾಯನಿಕ ಸಮೃದ್ಧವಾಗಿದ್ದು, ಇದು ನಮ್ಮ ಮೂಡ್ ಅನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಇದು ನಮ್ಮನ್ನು ಉಲ್ಲಾಸದಿಂದ ಮತ್ತು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಸಿರೊಟೋನಿನ್ ಕೊರತೆಯು ಖಿನ್ನತೆಗೆ ಕಾರಣವಾಗಬಲ್ಲುದು. ಖಿನ್ನತೆಗೆ ಗುರಿಯಾಗುವುದನು ತಪ್ಪಿಸಲು ಮತ್ತು ಖಿನ್ನತೆಯನ್ನು ನಿವಾರಿಸಲು ಬಾಳೆಹಣ್ಣಿನ ಸಿಪ್ಪೆ ಅತ್ಯುತ್ತಮ ನೈಸರ್ಗಿಕ ಮದ್ದಾಗಿದೆ. ನಮ್ಮ ಶರೀರದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಲು ವಾರಕ್ಕೆ ಎರಡು ಬಾಳೆಹಣ್ಣಿನ ಸಿಪ್ಪೆಗಳನ್ನು ತಿಂದರೆ ಸಾಕು. ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿ ಅದನ್ನು ವಿವಿಧ ಅಡುಗೆಗಳಲ್ಲಿ ಸೇರಿಸಬಹುದು ಅಥವಾ ಮಿಲ್ಕ್‌ಶೇಕ್ ಇತ್ಯಾದಿಗಳಲ್ಲಿ ಸೇರಿಸಿ ಸೇವಿಸಬಹುದು.

► ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ

ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ ಹೆಚ್ಚಿನ ನಾರು ಅದರ ಸಿಪ್ಪೆಯಲ್ಲಿರುತ್ತದೆ. ಅದು ಕರಗಬಲ್ಲ ಮತ್ತ ಕರಗದ ನಾರಿನಿಂದ ತುಂಬಿದೆ. ನಾರು ಕೊಲೆಸ್ಟ್ರಾಲ್‌ನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಅದು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ ಬೆಳವಣಿಗೆಯನ್ನು ತಡೆಯುವ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾದರೆ ಹೃದಯನಾಳೀಯ ರೋಗಗಳು ಮತ್ತು ಮಿದುಳಿನ ಆಘಾತವುಂಟಾಗುವ ಅಪಾಯವೂ ಕಡಿಮೆಯಾಗುತ್ತದೆ. ಶರೀರದಲ್ಲಿಯ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ನಾರನ್ನು ಪಡೆಯಲು ಕಚ್ಚಾ ಬಾಳೆಹಣ್ಣಿನ ಸಿಪ್ಪೆಯನ್ನು ತಿನ್ನಬಹುದಾಗಿದೆ.

► ಶರೀರದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ

ನಾರು ಸುಲಭವಾಗಿ ಜೀರ್ಣಗೊಳ್ಳುತ್ತದೆ ಮತ್ತು ಶರೀರದಲ್ಲಿ ಕೊಬ್ಬು ಸಂಗ್ರಹವಾಗುವುದಕ್ಕೆ ಸಹಕರಿಸುವುದಿಲ್ಲ,ಹೀಗಾಗಿ ನಾರಿನಂಶ ಅಧಿಕವಾಗಿರುವ ಆಹಾರಗಳು ಶರೀರದ ತೂಕವನ್ನು ಇಳಿಸಲು ನೆರವಾಗುತ್ತವೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ನಾರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದು ಶರೀರದ ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ.

► ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೊಡವೆಗಳು ಮತ್ತು ಚರ್ಮದ ಸುಕ್ಕುಗಳನ್ನು ನಿವಾರಿಸುವಲ್ಲಿ ಬಾಳೆಹಣ್ಣಿನ ಸಿಪ್ಪೆ ಅತ್ಯಂತ ಪರಿಣಾಮಕಾರಿಯಾಗಿದೆ. ಮುಖದಲ್ಲಿ ಮೊಡವೆಗಳಿದ್ದಾಗ ಒಂದು ವಾರ ಪ್ರತಿದಿನ ಐದು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಗಮನಾರ್ಹ ಫಲಿತಾಂಶ ಕಂಡುಬರುತ್ತದೆ. ಅದು ಚರ್ಮವು ತೇವಾಂಶದಿಂದ ಕೂಡಿರುವಂತೆಯೂ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಕಿವುಚಿ ಅದನ್ನು ಮುಖಕ್ಕೆ ಲೇಪಿಸಿಕೊಂಡು ಐದು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಕಿವುಚಿದ ಬಾಳೆಹಣ್ಣಿನ ಸಿಪ್ಪೆಗೆ ಮೊಸರನ್ನು ಸೇರಿಸಕೊಳ್ಳಬಹುದು.

► ಹಲ್ಲುಗಳನ್ನು ಬಿಳಿಯಾಗಿಸುತ್ತದೆ

ಬಿಳಿಯ ಹಲ್ಲುಗಳನ್ನು ಇಷ್ಟ ಪಡದವರಾರು? ಅವು ಇತರರ ನಡುವೆ ನಿಮ್ಮ ವ್ಯಕ್ತಿತ್ವವು ಉತ್ತಮ ಪ್ರಭಾವ ಬೀರುವಂತೆ ಮಾಡುತ್ತವೆ. ಹಲ್ಲುಗಳನ್ನು ಬಿಳಿಯಾಗಿಸಲು ನೀವು ವಿವಿಧ ಬಗೆಯ ಪ್ರಯತ್ನಗಳನ್ನು ಮಾಡುತ್ತಿರಬಹುದು ಮತ್ತು ಕಂಡ ಕಂಡ ಟೂಥ್‌ಪೇಸ್ಟ್‌ಗಳನ್ನು ಬಳಸುತ್ತಿರಬಹುದು. ಹಲ್ಲುಗಳನ್ನು ಬಿಳಿಯಾಗಿಸಲು ಬಾಳೆಹಣ್ಣಿನ ಸಿಪ್ಪೆ ಅತ್ಯುತ್ತಮ ನೈಸರ್ಗಿಕ ಉಪಾಯವಾಗಿದೆ. ತಾಜಾ ಬಾಳೆಹಣ್ಣಿನ ಸಿಪ್ಪೆಯಿಂದ ಒಂದು ವಾರ ಕಾಲ ಪ್ರತಿದಿನ ಹಲ್ಲುಗಳನ್ನು ಕನಿಷ್ಠ ಒಂದು ನಿಮಿಷದವರೆಗೆ ಉಜ್ಜಿಕೊಂಡರೆ ನಿರೀಕ್ಷಿತ ಪರಿಣಾಮ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News