ಮೂರನೇ ಟ್ವೆಂಟಿ-20: ಭಾರತಕ್ಕೆ 182 ರನ್ ಸವಾಲು

Update: 2018-11-11 15:12 GMT

ಚೆನ್ನೈ, ನ.11: ಈಗಾಗಲೇ ಸರಣಿ ಕಳೆದುಕೊಂಡಿರುವ ವೆಸ್ಟ್‌ಇಂಡೀಸ್ ತಂಡ ರವಿವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 182 ರನ್ ಗುರಿ ನೀಡಿದೆ.

ಟಾಸ್ ಜಯಿಸಿದ ವಿಂಡೀಸ್ ನಾಯಕ ಕ್ರೆಗ್ ಬ್ರಾತ್‌ವೇಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಿಕೊಲಸ್ ಪೂರನ್ ಮಿಂಚಿನ ಅರ್ಧಶತಕ(53,25 ಎಸೆತ) ಹಾಗೂ ಡ್ವೆಯ್ನೆ ಬ್ರಾವೊ ಅವರ ಔಟಾಗದೆ 43 ರನ್ ಕೊಡುಗೆ ನೆರವಿನಿಂದ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 181 ರನ್ ಕಲೆ ಹಾಕಿತು.

ಪೂರನ್ ಹಾಗೂ ಬ್ರಾವೊ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸುವ ಮೂಲಕ ವಿಂಡೀಸ್ 181 ರನ್ ಗಳಿಸಲು ನೆರವಾದರು.

ಕೊನೆಯ ಓವರ್ ಎಸೆದ ಅಹ್ಮದ್ ಬೌಲಿಂಗ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಪೂರನ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಹ್ಮದ್ ಕೊನೆಯ ಓವರ್‌ನಲ್ಲಿ 23 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.

ಔಟಾಗದೆ 53 ರನ್ ಗಳಿಸಿದ ಪೂರನ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಪೂರನ್‌ಗೆ ಉತ್ತಮ ಸಾಥ್ ನೀಡಿದ ಬ್ರಾವೊ 37 ಎಸೆತಗಳ ತಾಳ್ಮೆಯ ಇನಿಂಗ್ಸ್‌ನಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಿಡಿಸಿದರು.

ಇನಿಂಗ್ಸ್ ಆರಂಭಿಸಿದ ಹೋಪ್(24) ಹಾಗೂ ಹೆಟ್ಮೆಯರ್(26)6.1 ಓವರ್‌ಗಳಲ್ಲಿ 51 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಹೆಟ್ಮೆಯರ್, ವಿಕೆಟ್‌ಕೀಪರ್ ದಿನೇಶ್ ರಾಮ್ದಿನ್(15) ವಿಕೆಟ್ ಒಪ್ಪಿಸಿದಾಗ ವಿಂಡೀಸ್ ಸ್ಕೋರ್ 94ಕ್ಕೆ 3.

ಭಾರತದ ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಾಲ್ 28 ರನ್‌ಗೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News