ಕಚ್ಚಾತೈಲ ಮತ್ತು ರೂಪಾಯಿ ಕುರಿತು ಹೊಸ ಕಳವಳಗಳ ಮಧ್ಯೆ ಸೆನ್ಸೆಕ್ಸ್ 346 ಅಂಶ ಪತನ

Update: 2018-11-12 14:02 GMT

ಮುಂಬೈ,ನ.12: ಅಮೆರಿಕದ ಡಾಲರ್‌ನೆದುರು ರೂಪಾಯಿಯ ಕುಸಿತ ಮತ್ತು ಹೆಚ್ಚುತ್ತಿರುವ ಜಾಗತಿಕ ಕಚ್ಚಾತೈಲ ಬೆಲೆಗಳ ಕುರಿತು ಹೊಸದಾಗಿ ಸೃಷ್ಟಿಯಾಗಿರುವ ಕಳವಳಗಳಿಂದಾಗಿ ವಹಿವಾಟಿನ ಕೊನೆಯ ಅವಧಿಯಲ್ಲಿ ವಾಹನ ಮತ್ತು ಶಕ್ತಿ ಕ್ಷೇತ್ರಗಳ ಶೇರುಗಳ ಮಾರಾಟದ ಭರಾಟೆಯಿಂದಾಗಿ ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಸುಮಾರು 346 ಅಂಶಗಳ ಪತನದೊಂದಿಗೆ 34812.99ರಲ್ಲಿ ಮುಕ್ತಾಯಗೊಂಡಿದೆ. ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ಕೂಡ 103 ಅಂಶಗಳ ಕುಸಿತದೊಂದಿಗೆ 10,482.20ಕ್ಕೆ ದಿನದಾಟವನ್ನು ಮುಗಿಸಿದೆ.

ಕಚಾತೈಲ ಬೆಲೆಗಳು ಇಳಿಯುತ್ತಿರುವುನ್ನು ಚರ್ಚಿಸಲು ಪ್ರಮುಖ ಉತ್ಪಾದಕರು ರವಿವಾರ ನಡೆಸಿದ್ದ ಮಹತ್ವದ ಸಭೆಯಲ್ಲಿ ಮುಂದಿನ ತಿಂಗಳಿನಿಂದ ತನ್ನ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ವಿಶ್ವದ ಅಗ್ರ ಕಚ್ಚಾತೈಲ ರಫ್ತು ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಇಳಿಕೆಯ ಹಾದಿಯಲ್ಲಿದ್ದ ಜಾಗತಿಕ ಕಚ್ಚಾತೈಲದ ಬೆಲೆ ಸೋಮವಾರ ಪ್ರತಿ ಬ್ಯಾರೆಲ್‌ಗೆ ಶೇ.2.09ರಷ್ಟು ಏರಿಕೆಯಾಗಿ 71.62 ಡಾಲರ್‌ಗೆ ತಲುಪಿದೆ.

ಇತ್ತ ಭಾರತೀಯ ರೂಪಾಯಿ ವಹಿವಾಟಿನ ಮಧ್ಯದಲ್ಲಿ 57 ಪೈಸೆಗಳನ್ನು ಕಳೆದುಕೊಂಡು ಮತ್ತೊಮ್ಮೆ 73ಕ್ಕಿಂತ ಕೆಳಕ್ಕೆ ಕುಸಿದಿದ್ದು ದೇಶಿಯ ಮಾರುಕಟ್ಟೆಯ ಮೆಲೆ ಋಣಾತ್ಮಕ ಪರಿಣಾಮವನ್ನು ಬೀರಿತ್ತು. 73.07ಕ್ಕೆ ಕುಸಿದಿದ್ದ ಅದು ಸಂಜೆಯ ವೇಳೆಗೆ 72.87ಕ್ಕೆ ಚೇತರಿಸಿಕೊಂಡಿದೆ.

ಸೋಮವಾರ ಸೆಪ್ಟೆಂಬರ್‌ನ ಕೈಗಾರಿಕಾ ಉತ್ಪಾದನೆ ಸೂಚ್ಯಂಕ(ಐಐಪಿ) ಮತ್ತು ಅಕ್ಟೋಬರ್‌ನ ಸಿಪಿಐ ಹಣದುಬ್ಬರದ ಅಂಕಿಅಂಶಗಳು ಬಿಡುಗಡೆಯಾಗಲಿರುವ ಅಂಶವೂ ಕೂಡ ಹೂಡಿಕೆದಾರು ಎಚ್ಚರಿಕೆ ವಹಿಸುವಂತೆ ಮಾಡಿತ್ತು. ಹೆಚ್ಚಿನ ಇತರ ಏಷ್ಯನ್ ಶೇರು ಮಾರುಕಟ್ಟೆಗಳಲ್ಲಿನ ಮಿಶ್ರ ಪ್ರವೃತ್ತಿಗಳು ಮತ್ತು ಐರೋಪ್ಯ ಶೇರುಗಳು ಆರಂಭದಲ್ಲಿ ಕುಸಿತ ದಾಖಲಿಸಿದ್ದು ಕೂಡ ದೇಶಿಯ ಶೇರು ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News