ಛತ್ತೀಸ್‌ಗಢ: ನಕ್ಸಲರೊಂದಿಗೆ ಗುಂಡಿನ ಚಕಮಕಿ; ಇಬ್ಬರು ಯೋಧರಿಗೆ ಗಾಯ

Update: 2018-11-12 15:29 GMT

ರಾಯ್‌ಪುರ, ನ.12: ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ಮಾವೋವಾದಿ ನಕ್ಸಲರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ರಾಯ್‌ಪುರದಿಂದ ಸುಮಾರು 500 ಕಿ.ಮೀ. ದೂರದ ಪಮೇದ್ ಪ್ರದೇಶದ ಅರಣ್ಯಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ಇಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದು ಕೋಬ್ರಾ(ಕಮಾಂಡೊ ಬಟಾಲಿಯನ್ ಆಫ್ ರೆಸೊಲ್ಯುಟ್ ಆಕ್ಷನ್) ಪಡೆಯ ಇಬ್ಬರು ಸಿಬ್ಬಂದಿಗಳು ಗಾಯಗೊಂಡರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಮಾವೋವಾದಿ ನಕ್ಸಲರು ಸ್ಥಳದಿಂದ ಪರಾರಿಯಾದರು. ರವಿವಾರ ಅಂತಗಢ ಎಂಬ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ತೀವ್ರ ಗಾಯಗೊಂಡಿದ್ದ ಬಿಎಸ್ಸೆಫ್ ಯೋಧ ಮೃತಪಟ್ಟಿದ್ದಾರೆ.

ಛತ್ತೀಸ್‌ಗಢ ವಿಧಾನಸಭೆಯ ಪ್ರಥಮ ಹಂತದ ಮತದಾನ ಸೋಮವಾರ ನಡೆದಿದ್ದು ಮತದಾರರಲ್ಲಿ ಆತಂಕ ಹುಟ್ಟಿಸಲು ಪ್ರಯತ್ನ ನಡೆಸುತ್ತಿರುವ ನಕ್ಸಲರು ದಾಂಟೆವಾಡ ಜಿಲ್ಲೆಯಲ್ಲಿ ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News