ಮದ್ಯಪಾನ ಮಾಡಿ ಸಿಕ್ಕಿಬಿದ್ದ ಏರ್‌ ಇಂಡಿಯಾ ಪೈಲಟ್ ನ ಲೈಸೆನ್ಸ್ ಅಮಾನತು

Update: 2018-11-12 15:32 GMT

ಹೊಸದಿಲ್ಲಿ, ನ.12: ಮದ್ಯಪಾನ ಮಾಡಿರುವುದನ್ನು ಪತ್ತೆ ಹಚ್ಚಲು ನಡೆಸಿದ ಉಸಿರಾಟ ವಿಶ್ಲೇಷಕ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಏರ್‌ಇಂಡಿಯಾದ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಕ್ಯಾಪ್ಟನ್ ಅರವಿಂದ್ ಕಟ್ಪಾಲಿಯಾರ ಹಾರಾಟ ಲೈಸೆನ್ಸ್ ಅನ್ನು ನಾಗರಿಕ ವಾಯುಯಾನ ಮಹಾನಿರ್ದೇಶಕರು ಮೂರು ವರ್ಷದವರೆಗೆ ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಹಾರಾಟಕ್ಕೂ ಮುನ್ನ ನಡೆಸಲಾದ ಪರೀಕ್ಷೆಯಲ್ಲಿ ಅರವಿಂದ್ ಕಟ್ಪಾಲಿಯಾ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು ಬದಲಿ ಪೈಲಟ್ ವಿಮಾನವನ್ನು ಚಲಾಯಿಸಿದ್ದಾರೆ. ಇದರಿಂದ ನ್ಯೂಡೆಲ್ಲಿ -ಲಂಡನ್ ವಿಮಾನ 55 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸಿತು. ಪ್ರಥಮ ಅವಕಾಶದಲ್ಲಿ ವಿಫಲವಾದ ಬಳಿಕ ಕ್ಯಾಪ್ಟನ್ ಎ.ಕೆ.ಕಟ್ಪಾಲಿಯಾಗೆ ಮತ್ತೊಂದು ಅವಕಾಶ ನೀಡಲಾಯಿತು. ಆಗಲೂ ಅವರು ವಿಫಲರಾದರು. ಈ ಕಾರಣದಿಂದ ಅವರನ್ನು ಕೆಳಗಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಸೂಚಿಸಿರುವುದಾಗಿ ಇಲಾಖೆ ಟ್ವೀಟ್ ಮಾಡಿದೆ.

2017ರಲ್ಲಿ ಉಸಿರಾಟ ವಿಶ್ಲೇಷಕ ಪರೀಕ್ಷೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಅರವಿಂದ್ ಕಟ್ಪಾಲಿಯಾರ ಲೈಸೆನ್ಸನ್ನು 3 ತಿಂಗಳು ಅಮಾನತುಗೊಳಿಸಲಾಗಿತ್ತು. ಬಳಿಕ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಯಿಂದ ಅಮಾತುಗೊಳಿಸಲಾಗಿತ್ತು. ನಂತರ ಅವರು ಏರ್‌ಇಂಡಿಯಾದ ನಿರ್ದೇಶಕ(ಕಾರ್ಯಾಚರಣೆ) ಹುದ್ದೆಗೆ ನೇಮಕಗೊಂಡಿದ್ದರು. ಮತ್ತೊಂದು ಘಟನೆಯಲ್ಲಿ, ರವಿವಾರ ದಿಲ್ಲಿಯ ಇಂದಿರಾಗಾಂಧಿ ವಿಮಾನನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನದ ಸಹ ಪೈಲಟ್ ಉಸಿರಾಟ ವಿಶ್ಲೇಷಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಮರೆತು ವಿಮಾನವನ್ನು ಟೇಕ್ ಆಫ್ ಮಾಡಿದ್ದಾನೆ. ಕೆಲ ಹೊತ್ತಿನ ಬಳಿಕ ನೆನಪಾಗಿ ಮರಳಿ ವಿಮಾನವನ್ನು ನಿಲ್ದಾಣದಲ್ಲಿ ಲ್ಯಾಂಡ್ ಮಾಡಿ, ಪರೀಕ್ಷೆ ನಡೆಸಿದ್ದು ವಿಮಾನ ಹಲವು ಗಂಟೆಗಳ ವಿಳಂಬದ ಬಳಿಕ ಮತ್ತೆ ಟೇಕಾಫ್ ಆಗಿದೆ. ನಿಯಮದಂತೆ ಸಹಪೈಲಟ್‌ನನ್ನು ಮೂರು ತಿಂಗಳ ಅವಧಿಗೆ ವಿಮಾನ ಚಲಾಯಿಸಲು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಕಾಯ್ದೆಯ 24ನೇ ನಿಯಮದ ಪ್ರಕಾರ ವಿಮಾನವು ಪ್ರಯಾಣ ಆರಂಭಿಸುವ 12 ಗಂಟೆಗಳ ಮೊದಲು ಸಿಬ್ಬಂದಿಗಳು ಮದ್ಯಪಾನ ಮಾಡುವಂತಿಲ್ಲ ಮತ್ತು ವಿಮಾನ ಟೇಕ್ ಆಫ್ ಆಗುವ ಮೊದಲು ಹಾಗೂ ಲ್ಯಾಂಡ್ ಆದ ಬಳಿಕ ಉಸಿರಾಟ ವಿಶ್ಲೇಷಕ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News