ಗುಜರಾತ್ ಗಲಭೆ: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

Update: 2018-11-13 09:15 GMT

ಹೊಸದಿಲ್ಲಿ, ನ.13: ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ನ.19ಕ್ಕೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಇಂದು ಸಮ್ಮತಿ ನೀಡಿದೆ.

2002ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಬಲಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ‘ಸೂಕ್ತ ಸಾಕ್ಷಾಧಾರದ ಕೊರತೆ’ಯ ಕಾರಣ ನೀಡಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಇತರ ರಾಜಕಾರಣಿಗಳು, ಹಿರಿಯ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ(ಸಿಟ್)ದೋಷ ಮಕ್ತಗೊಳಿಸಿದ್ದನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದರು.

2012ರಲ್ಲಿ ಮೆಟ್ರೊಪಾಲಿಟನ್ ನ್ಯಾಯಾಲಯ ಗೋಧ್ರಾ ಗಲಭೆ ಬಳಿಕ ನಡೆದ ಹತ್ಯಾಕಾಂಡದಲ್ಲಿ ಆರೋಪಿಗಳಾಗಿದ್ದ ಎಲ್ಲ 58 ಮಂದಿಯನ್ನು ದೋಷ ಮುಕ್ತಗೊಳಿಸಿತ್ತು. ಸಿಟ್ ಪ್ರಕಾರ ಝಾಕಿಯಾ ದೂರಿನಲ್ಲಿ ಪಟ್ಟಿ ಮಾಡಿರುವ 58 ಮಂದಿಯ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಂಎಸ್ ಭಟ್ ತೀರ್ಪು ನೀಡಿದ್ದರು.

ಆ ಬಳಿಕ ಅರ್ಜಿದಾರರು 2013ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಗುಜರಾತ್ ಹೈಕೋರ್ಟ್ ಕಳೆದ ವರ್ಷ ಮೆಟ್ರೊಪಾಲಿಟನ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ನರೋಡಾಪಾಟಿಯಾ, ನರೋಡಾ ಗಾಮ್ ಹಾಗೂ ಗುಲ್ಬರ್ಗ್ ಗಲಭೆ ಪ್ರಕರಣಗಳ ಹಿಂದೆ 'ಭಾರೀ ಸಂಚು'ಅಡಗಿದೆ ಎಂಬ ಜಾಫ್ರಿಯ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News